ಹಳೆಯಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಾವಂಜೆಯ ಬಳಿಯಲ್ಲಿ ಮಾರುತಿ ಓಮ್ನಿ ಕಾರೊಂದು ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ರಾತ್ರಿ 9ಕ್ಕೆ ನಡೆದಿದೆ.
ಸಾವನ್ನಪ್ಪಿದವರನ್ನು ಮುಕ್ಕ ಪಡ್ರೆ ನಿವಾಸಿಗಳಾದ ಭುಜಂಗ ಹಾಗೂ ವಸಂತ್ ಎಂದು ಗುರುತಿಸಲಾಗಿದ್ದು, ಕಾರು ಚಾಲಕ ಬಾಲಕೃಷ್ಣ ಸಹ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಳೆಯಂಗಡಿ ಒಳ ರಸ್ತೆಯಿಂದ ಪಾವಂಜೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವಾಗ ಓಮ್ನಿ ಕಾರು ಮಂಗಳೂರಿನಿಂದ ಬರುತ್ತಿದ್ದ ಎಕ್ಸ್ ಪ್ರೆಸ್ ಬಸ್ಸಿಗೆ ನೇರವಾಗಿ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ಕಾರಿನಲ್ಲಿದ್ದ ವಸಂತ ಮತ್ತು ಬುಜಂಗ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಲಕೃಷ್ಣ ಅವರಿಗೆ ಗಂಭೀರ ಗಾಯವಾಗಿದೆ.
ಮಂಗಳೂರು ಉತ್ತರ ವಲಯದ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.