ಮುಂಬೈ: ಕೊನೆಯ ಹಂತದಲ್ಲಿ ಮಹೇಂದ್ರ ಸಿಂಗ್ ಧೋನಿ ಸಿಡಿಲಬ್ಬರದ ಬ್ಯಾಟಿಂಗ್ (28*) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಈ ಮೂಲಕ ಟೂರ್ನಿಯಲ್ಲಿ ಚೆನ್ನೈ ಎರಡನೇ ಗೆಲುವು ದಾಖಲಿಸಿದೆ. ಇನ್ನೊಂದೆಡೆ ಸತತ ಏಳನೇ ಸೋಲಿಗೆ ಶರಣಾಗಿರುವ ಮುಂಬೈ, ಟೂರ್ನಿಯಿಂದಲೇ ಬಹುತೇಕ ನಿರ್ಗಮನದ ಹಾದಿ ಹಿಡಿದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಮುಂಬೈ, ತಿಲಕ್ ವರ್ಮಾ ಸಮಯೋಚಿತ ಅರ್ಧಶತಕದ (51*) ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 155ರನ್ ಗಳಿಸಿತ್ತು. ಚೆನ್ನೈ ಪರ ಮುಕೇಶ್ ಚೌಧರಿ ಮೂರು ವಿಕೆಟ್ ಕಬಳಿಸಿ ಮಿಂಚಿದರು.
ಬಳಿಕ ಗುರಿ ಬೆನ್ನತ್ತಿದ ಚೆನ್ನೈ ಒಂದು ಹಂತದಲ್ಲಿ ಸೋಲಿನ ಭೀತಿಗೆ ಒಳಗಾಗಿತ್ತು. ಅಲ್ಲದೆ ಅಂತಿಮ ಓವರ್‌ನಲ್ಲಿ ಗೆಲುವಿಗೆ 17 ರನ್ ಬೇಕಿತ್ತು. ಆದರೆ ಗತಕಾಲದ ವೈಭವ ಮರುಕಳಿಸಿದ ಧೋನಿ, ಎರಡು ಬೌಂಡರಿ ಹಾಗೂ ಸಿಕ್ಸರ್ ಬಾರಿಸುವ ಮೂಲಕ ಚೆನ್ನೈಗೆ ರೋಚಕ ಗೆಲುವು ಒದಗಿಸಿಕೊಟ್ಟರು.
ಕೇವಲ 13 ಎಸೆತಗಳನ್ನು ಎದುರಿಸಿದ ಧೋನಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 28 ರನ್ ಗಳಿಸಿ ಔಟಾಗದೆ ಉಳಿದರು.
ಮುಂಬೈ ತರಹನೇ ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. ಋತುರಾಜ್ ಗಾಯಕವಾಡ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು. ಮಿಚೆಲ್ ಸ್ಯಾಂಟ್ನರ್ (11) ಕೂಡ ಬೇಗನೇ ನಿರ್ಗಮಿಸಿದರು.
ಅನುಭವಿ ರಾಬಿನ್ ಉತ್ತಪ್ಪ ಹಾಗೂ ಅಂಬಟಿ ರಾಯುಡು ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.
ಉತ್ತಮವಾಗಿ ಆಡುತ್ತಿದ್ದ ಉತ್ತಪ್ಪ (30), ಅಂಬಟಿ ರಾಯುಡು (40) ಹಾಗೂ ಶಿವಂ ದುಬೆ (13) ಔಟ್ ಆಗುವುದರೊಂದಿಗೆ ಪಂದ್ಯ ರೋಚಕ ಹಂತವನ್ನು ತಲುಪಿತು.
ಗಾಯಕವಾಡ್, ಸ್ಯಾಂಟ್ನರ್, ದುಬೆ ಹಾಗೂ ರಾಯುಡು ವಿಕೆಟ್ ಗಳಿಸಿದ ಡ್ಯಾನಿಯಲ್ ಸ್ಯಾಮ್ಸ್ (30ಕ್ಕೆ 4 ವಿಕೆಟ್) ಮಾರಕವಾಗಿ ಕಾಡಿದರು.
ನಾಯಕ ರವೀಂದ್ರ ಜಡೇಜ (3) ಕಳಪೆ ಬ್ಯಾಟಿಂಗ್ ಮುಂದುವರಿಸಿದರು.
ಆದರೆ ಕೊನೆಯ ಹಂತದಲ್ಲಿ ಧೋನಿ ಹಾಗೂ ಡ್ವೇನ್ ಪ್ರೆಟೋರಿಯಸ್ (22) ಪಂದ್ಯದ ಚಿತ್ರಣವನ್ನೇ ಬದಲಿಸಿದರು.
ಜೈದೇವ್ ಉನಾದ್ಕಟ್ ಅಂತಿಮ ಓವರ್‌ನಲ್ಲಿ ಧೋನಿ, ತಾವೇಕೆ ನೈಜ ಫಿನಿಶರ್ ಎಂಬುದನ್ನು ಮಗದೊಮ್ಮೆ ಸಾಬೀತು ಮಾಡಿದರು. ಅಲ್ಲದೆ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ತಿಲಕ್ ಅಮೋಘ ಆಟ…
ಈ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ, ತಿಲಕ್ ವರ್ಮಾ ಸಮಯೋಚಿತ ಅರ್ಧಶತಕದ (51*) ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 155ರನ್ ಗಳಿಸಿತು.
ಮೊದಲ ಓವರ್‌ನಲ್ಲೇ ನಾಯಕ ರೋಹಿತ್ ಶರ್ಮಾ (0) ಹಾಗೂ ಇಶಾನ್ ಕಿಶನ್ (0) ವಿಕೆಟ್ ಕಬಳಿಸಿದ ಮುಕೇಶ್ ಚೌಧರಿ ಡಬಲ್ ಆಘಾತ ನೀಡಿದರು. ಬೆನ್ನಲ್ಲೇ ಡೆವಾಲ್ಡ್ ಬ್ರೆವಿಸ್ (4) ಅವರಿಗೂ ಮುಕೇಶ್ ಪೆವಿಲಿಯನ್ ಹಾದಿ ತೋರಿಸಿದರು.
ಚೆನ್ನೈ ಪರ ಮುಕೇಶ್ ಚೌಧರಿ ಮೂರು ವಿಕೆಟ್ ಕಬಳಿಸಿ ಮಿಂಚಿದರು
ಸೂರ್ಯಕುಮಾರ್ ಯಾದವ್ (32) ಉತ್ತಮ ಆಟ ಪ್ರದರ್ಶಿಸಿದರೂ ದೊಡ್ಡ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ಚೊಚ್ಚಲ ಪಂದ್ಯ ಆಡುತ್ತಿರುವ ಹೃತಿಕ್ ಶೋಕಿನ್ (25) ಪ್ರಭಾವಿ ಎನಿಸಿದರು. ಅನುಭವಿ ಕೀರಾನ್ ಪೊಲಾರ್ಡ್ (14) ಹೆಚ್ಚು ಹೊತ್ತು ನಿಲ್ಲನಿಲ್ಲ.
ಇನ್ನೊಂದೆಡೆ ಕೆಚ್ಚೆದೆಯ ಹೋರಾಟ ತೋರಿದ ತಿಲಕ್ ವರ್ಮಾ 42 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಮುಂಬೈ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು.
ಅಂತಿಮವಾಗಿ ಮುಂಬೈ ವಿಕೆಟ್ ಏಳು ನಷ್ಟಕ್ಕೆ 155 ರನ್ ಗಳಿಸಿತು. 43 ಎಸೆತಗಳನ್ನು ಎದುರಿಸಿದ ತಿಲಕ್ ವರ್ಮಾ 51 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿ ಅಜೇಯರಾಗುಳಿದರು.
ಅವರಿಗೆ ಉತ್ತಮ ಸಾಥ್ ನೀಡಿದ ಜೈದೇವ್ ಉನಾದ್ಕಟ್ 19 ರನ್ (9 ಎಸೆತ, 1 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು.