ಮಂಗಳೂರು: ಪಿಯುಸಿ ಪರೀಕ್ಷೆಗಳು ಇಂದಿನಿಂದ ಆರಂಭಗೊಂಡಿದ್ದು ಹಿಜಾಬ್ ವಿವಾದ ಹುಟ್ಟಿಕೊಂಡಿದ್ದ ಕರಾವಳಿಯಲ್ಲೂ ಯಾವುದೇ ರೀತಿಯಲ್ಲಿ ಗೊಂದಲಗಳು ಆಗದಂತೆ ಶಿಕ್ಷಣ ಇಲಾಖೆ ಬಿಗು ಮುನ್ನೆಚ್ಚರಿಕೆ ವಹಿಸಿಕೊಂಡು ಪರೀಕ್ಷೆಗೆ ಸಿದ್ದತೆ ಮಾಡಿದೆ.
ಇಂದಿನಿಂದ ಮೇ 18ರವರೆಗೆ ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆಗಳು ನಡೆಯಲಿವೆ. ಈ ಶೈಕ್ಷಣಿಕ ವರ್ಷದಲ್ಲಿ ರಾಜ್ಯಾದ್ಯಂತ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಈ ಪೈಕಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು. ಇವರಲ್ಲಿ 6,00,519 ಮಂದಿ ರೆಗ್ಯುಲರ್ ವಿದ್ಯಾರ್ಥಿಗಳಾಗಿದ್ದರೆ, 61,808 ಮಕ್ಕಳು ಪುನರಾವರ್ತಿತ ಅಭ್ಯರ್ಥಿಗಳು. 21,928 ಮಂದಿ ಖಾಸಗಿ ಅಭ್ಯರ್ಥಿಗಳಾಗಿದ್ದಾರೆ.
ಇವರಲ್ಲಿ ಕಲಾ ವಿಭಾಗ- 2,28,167 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಿಂದ 2,45,519 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಿಂದ 2,10,569 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು ಪರೀಕ್ಷೆಗೆ 31,308 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಇನ್ನು ದ.ಕ ಜಿಲ್ಲೆಯ 12 ಸರ್ಕಾರಿ, 23 ಅನುದಾನಿತ ಮತ್ತು 16 ಅನುದಾನ ರಹಿತ ಕಾಲೇಜುಗಳ ಸಹಿತ ಒಟ್ಟು 51 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಅವುಗಳಿಗೆ 14 ಮಂದಿ ರೂಟ್ ಆಫೀಸರ್‌ಗಳನ್ನು ನೇಮಕ ಮಾಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 15,652 ಬಾಲಕರು ಹಾಗೂ 15,656 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಕಲಾ ವಿಭಾಗದಲ್ಲಿ 4329, ವಾಣಿಜ್ಯ ವಿಭಾಗದಲ್ಲಿ 14,987 ಹಾಗೂ ವಿಜ್ಞಾನ ವಿಭಾಗದಲ್ಲಿ 11,992 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಹಿಜಾಬ್ ಧರಿಸಿಕೊಂಡು ಕಾಲೇಜಿನವರೆಗೆ ಬಂದ ವಿದ್ಯಾರ್ಥಿಗಳು ಬಳಿಕ ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಲು ಮುಂದಾಗಿದ್ದಾರೆ.
ಸರಕಾರಿ ಆದೇಶದಂತೆ ಪರೀಕ್ಷೆ ಬರೆಯಲು ಆದೇಶ ನೀಡಲಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಆದ್ದರಿಂದ ಈಗಾಗಲೇ ಪರೀಕ್ಷೆಗಳು ಸುಸೂತ್ರವಾಗಿ ಆರಂಭಗೊಂಡಿದೆ.