dtvkannada

ನೆನಪಿನಂಗಳದಲ್ಲಿ ಸದಾ ಹಸಿರಾಗಿರುವ ಅನಾಥ ಮಕ್ಕಳ ಪರಿಚಾರಕ.



ಜ್ಞಾನ ಮಂದಿರದ ಮಗ್ಗುಲಲ್ಲಿ ಮಲಗಿರುವ ಶಿಕ್ಷಣ ಕೇಂದ್ರಗಳ ಪ್ರತಿಷ್ಠಾಪಕ.

ನಾಡು ಕಟ್ಟಿದ ನೇತಾರ ಇವರು ಸರಿ ಸಾಟಿ ಇಲ್ಲದ ಜನ ಸೇವಕ.

ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಇದ್ದ ಮಮ್ಮುಂಞಿ ಹಾಜಿ ಎಂಬ ಸಮಾಜ ಚಿಂತಕ.

✍ ಎಸ್ ಪಿ ಬಶೀರ್ ಶೇಕಮಲೆ,ಕುಂಬ್ರ


ನನ್ನ

“ಜೀವನದ
ಕೊನೆಯ
ಉಸಿರಿನ
ತನಕ
ಮಸೀದಿಯಲ್ಲಿ
ಇಮಾಮ್ ಜಮಾಅತ್
ಆಗಿ
ನಮಾಜ್
ನಿರ್ವಹಿಸಲು
ಸೌಭಾಗ್ಯವನ್ನು
ಕರುಣಿಸು
ಅಲ್ಲಾಹ್.”

ಇದು ಆ ಮಹಾನುಭಾವ ವ್ಯಕ್ತಿ ಸದಾ ಸಮಯ ಜಗದೊಡೆಯನ ಮುಂದೆ ತಲೆ ಬಾಗಿ ಸಮರ್ಪಿಸುತ್ತಿದ್ದ ಒಂದು ಪ್ರಾರ್ಥನೆಯಾಗಿತ್ತು.

ಆದರೆ

ಅವರನ್ನು ಐದು ವಕ್ತ್ ನಮಾಜ್ ಗೆ ಅವರ ಹಳೆಯ ಜೀಪ್ ನಲ್ಲಿ ಮಸೀದಿಗೆ ಕರೆದು ಕೊಂಡು ಹೋಗುತ್ತಿದ್ದ ಓರ್ವ ಮಗನಿಗೆ ಮನದೊಳಗೊಂದು ಚಿಂತೆ ಹೊರ ಸೂಸುತ್ತಿತ್ತು.

ಇದು ಹೇಗೆ ಸಾಧ್ಯ ರಬ್ಬೇ.?!

ತಂದೆಯವರು ವಯೋ ಸಹಜ ವಾರ್ಧಕ್ಯ ಪೀಡಿತರಾಗಿ ಮನೆಯಲ್ಲಿಯೇ ಮಲಗುವ ಪರಿಸ್ಥಿತಿ ಬರಲಿಕ್ಕಿಲ್ಲವೇ.?

ಆಗಲೂ ನಮಾಜ್ ಗೆ ಮಸೀದಿಗೆ ಹೋಗಲು ಸಾಧ್ಯವೇ.?

ಚಿಂತೆ ಸರಿಯೇ ಆಗಿತ್ತು.

ಅದಕ್ಕೆ ಸರಿಯಾದ ಉತ್ತರವನ್ನೂ ಆ ದಿನವು ತೋರಿಸಿ ಕೊಟ್ಟಿತ್ತು.

ಇಂದಿಗೆ ಸರಿಯಾಗಿ ಇಪ್ಪತ್ತೊಂದು ವರ್ಷಗಳ ಹಿಂದೆ.

ಇಂದಿನ ಇಪ್ಪತ್ತು ಇಪ್ಪತ್ತೈದು ವರ್ಷ ಪ್ರಾಯದ ಯುವಕರು
ಆ ವ್ಯಕ್ತಿಯನ್ನು ಕಣ್ಣಾರೆ ಕಂಡವರಲ್ಲ,
ಈ ವ್ಯಕ್ತಿಯ ಜೀವನವನ್ನು ನೋಡಿ ತಿಳಿದವರಲ್ಲ

ಈ ವಯೋಮಾನದ ಯುವಕರಿಗೆ ಈ ಅಕ್ಷರಗಳ ಅರ್ಪಣೆ.

ಇದು ಕತೆಯಲ್ಲ
ಇದೊಂದು ನೈಜ ವಾಸ್ತವ ಘಟನೆಗಳ,
ಬಲು ದೊಡ್ಡ ಜೀವನ ವೃತ್ತಾಂತದ
ಸಣ್ಣ ರೂಪದ ಸಮರ್ಪಣೆ

ಕ್ರಿ. ಶ. 2001
ಡಿಸೆಂಬರ್ 5

ಹಿಜರಿ 1422
ರಮಲಾನ್ 21

ಬುಧವಾರ ಅಸ್ತಮಿಸಿದ ಗುರುವಾರ
ಮದ್ಯ ರಾತ್ರಿ.!

“ಕೆಲವೊಮ್ಮೆ ನಾವು ನಂಬುವುದಿಲ್ಲ,
ಆದರೆ ನಂಬಲ್ಪಡುತ್ತೇವೆ”

ಎಂಬ ಮಹಾತ್ಮರೊಬ್ಬರ ಮಾರ್ಮಿಕ ಮಾತು ಮಾರ್ದ್ವನಿಸಿತ್ತು.

ಆ ದುಖಃ ವಾರ್ತೆಯಿಂದ ಜನಸಾಗರದ ಶರೀರವು ಕಂಪನಗೊಂಡಿತ್ತು.

ಹೃದಯದಲ್ಲಿ ವೇದನೆಯೆಂಬ ದುಃಖ ದುಮ್ಮಾನಗಳು ಅಲೆ ಅಲೆಯಾಗಿ ಅಪ್ಪಳಿಸಿತ್ತು.

ನಂಬಲಸಾಧ್ಯವಾದ ಕಹಿ ಘಟನೆಯೊಂದಕ್ಕೆ ಆ ದಿನ ಸಾಕ್ಷಿಯಾಗಿತ್ತು.

ಹೌದು,

ಹುಟ್ಟಿದವರು ಮರಣ ಹೊಂದಲೇಬೇಕು ಎಂಬ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿಧೇಯರಾದ ಎಂಬತ್ತು ವರ್ಷಗಳ ಸರಿಸಾಟಿಯಿಲ್ಲದ ಸಾಹಸಿ ,ಸಾವಿರಾರು ಅನಾಥ ಮಕ್ಕಳ ಸಂರಕ್ಷಕ ಶೇಖಮಲೆ ಮಮ್ಮುಂಞಿ ಹಾಜಿಯವರು
ಇಪ್ಪತ್ತೊಂದು ವರ್ಷಗಳ ಹಿಂದೆ ಅದೊಂದು ಪವಿತ್ರ ರಮಲಾನಿನ ಇಪ್ಪತ್ತೊಂದನೆಯ ಪಾವನ ಪುಣ್ಯ ರಾತ್ರಿ ವಫಾತ್ ಆದ ಸುದ್ದಿ ನಾಲ್ದೆಸೆಗಳಲ್ಲಿ ಪಸರಿಸಿದಾಗ ಜನರಿಗೆ ನಂಬಲಿಕ್ಕಾಗಿರಲಿಲ್ಲ
ಆದರೆ ಜನರು ನಂಬಲ್ಪಟ್ಟಿದ್ದರು.!

ದ.ಕ ಜಿಲ್ಲೆಯ ಸರ್ವ ಪ್ರಥಮ ಯತೀಂಖಾನ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನಾಥ ಸಂರಕ್ಷಣಾ ಕೇಂದ್ರವಾದ ಪುತ್ತೂರಿನ ಅನ್ಸಾರುದ್ದೀನ್ ಯತೀಂಖಾನವನ್ನು ಸ್ಥಾಪಿಸಿ ಸಮುದಾಯದ ಅನಾಥ ದುರ್ಬಲ ವರ್ಗದವರ ಬಗ್ಗೆ ಸಹಾನುಭೂತಿಯನ್ನು ತೋರಿಸುತ್ತಾ ಸಮಾಜದ ಶೈಕ್ಷಣಿಕ ಪ್ರಗತಿಯ ಆಂದೋಲನದ ರೂವಾರಿಯಾಗಿ ತನ್ನ ಜೀವಿತ ಕಾಲದ ಕೊನೆವರೆಗೂ ಅದರಲ್ಲಿ ಸಕ್ರೀಯವಾಗಿ ತನ್ನನ್ನು ಸಮರ್ಪಿಸಿದ್ದ ಅಸಾಧಾರಣ ಶಕ್ತಿಗಳ ಸರಳ ಸಾದಾ ವ್ಯಕ್ತಿಯಾಗಿದ್ದ ಮಮ್ಮುಂಞಿ ಹಾಜಿಯವರು ಇದ್ದಕ್ಕಿದ್ದಂತೆ ವಫಾತ್ ಆದಾಗ ಪುತ್ತೂರಿನ ಆತ್ಮೀಯ ವಲಯದ ವರ್ಣ ರಂಜಿತ ವ್ಯಕ್ತಿತ್ವವೊಂದು ಕಣ್ಮರೆಯಾಗಿತ್ತು..
ತುಂಬಲಾರದ ನಷ್ಟದಿಂದ ಶೋಕಸಾಗರದಲ್ಲಿ ಮುಳುಗಿದ ಪುತ್ತೂರುನಾದ್ಯಂತ ಮಾತ್ರವಲ್ಲ ಜಿಲ್ಲೆಯ ವಿವಿದೆಡೆಗಳಿಂದಲೂ, ಸಮೀಪದ ಕೇರಳದಿಂದಲೂ ಹಾಜಿಯವರ ವಫಾತ್ ನ ಸುದ್ದಿ ತಿಳಿದ ತಕ್ಷಣ ಆ ಪ್ರಶೋಭಿತ ವದನವನ್ನೊಮ್ಮೆ ಕಣ್ತುಂಬ ಕಾಣುವ ಅದಮ್ಯ ಆಸೆಯಿಂದ ಸಾವಿರಾರು ಮಂದಿ ಹಾಜಿಯವರ ಶೇಕಮಲೆ ನಿವಾಸಕ್ಕೆ ಪ್ರವಾಹೋಪಾದಿಯಲ್ಲಿ ಧಾವಿಸಿದ್ದರು.!

ಎಂದಿನಂತೆ ಅಂದೂ ಇಶಾ ಹಾಗೂ ತರಾವೀಹ್ ನಮಾಜ್ ಇಮಾಮ್ ಜಮಾಅತ್ ಆಗಿ ಮುಗಿಸಿ ಉಸ್ತಾದ್ ರವರ ವಯಲ್ ಕೇಳಿ ಮನೆಗೆ ಮರಳಿ ಉಪಹಾರ ಸೇವಿಸಿ ಮಲಗುವ ವರೆಗೂ ಅವರ ಆರೋಗ್ಯ ಎಂದಿನಂತೆ ಇತ್ತು.
ಸುಬುಹಾನಲ್ಲಾಹ್.

ಅಲ್ಲಾಹ್… ಅಲ್ಲಾಹ್…ಅಲ್ಲಾಹ್
ಎನ್ನುತ್ತಲೇ
ಸರಳ ನಿರಾಡಂಬರ ಸಾತ್ವಿಕ ಬದುಕು ಸಾಗಿಸಿದ್ದ ಆ ಮಹಾನ್ ಚೇತನ ಕೆಲವೇ ನಿಮಿಷಗಳಲ್ಲಿ ಇದ್ದಕ್ಕಿದ್ದಂತೆ ಇನ್ನಿಲ್ಲವಾಗಿದ್ದರು.!

ಅಲ್ಲಾಹು ಅವರ ಪ್ರಾರ್ಥನೆ ಸ್ವೀಕರಿಸಿ ಅನುಗ್ರಹಿಸಿದ.

ಜೀವನದ ಕೊನೆಯ ನಮಾಜ್ ಇಮಾಮ್ ಜಮಾಅತ್ ಆಗಿ ಮಸೀದಿಯಲ್ಲಿಯೇ ನಿರ್ವಹಿಸಲು ತೌಫೀಕ್ ಎರೆದು ಕೊಟ್ಟ.!

ಜೀವನ ಪೂರ್ತಿ ಅವಿರತವಾಗಿ
ಪರಿಶ್ರಮಿಸುತ್ತಿದ್ದ ಅವರ ಸರಳ ನಿರಾಡಂಭರ ಹಾಗೂ ಪರೋಪಕಾರಯುಕ್ತ ಬಾಳು ಸುಂದರವೂ,ಸುಸಜ್ಜಿತವೂ ಆಗಿತ್ತು.ತನ್ನ ಜೀವನ ಸಂಧ್ಯಾದ ಅಂತಿಮ ಕ್ಷಣದವರೆಗೂ ಪ್ರತೀ ಮುಂಜಾನೆಯಿಂದ ರಾತ್ರಿ ತನಕ ಗಡಿಯಾರದ ಮುಳ್ಳಿನಂತೆ ಅತೀ ಶ್ರದ್ಧೆಯಿಂದ ತನ್ನ ಬಿಡುವಿಲ್ಲದ ಚಟುವಟಿಕೆಗಳಿಂದ ನಿರತರಾಗುತ್ತಿದ್ದ ಅವರ ದುಡಿಮೆ ಮತ್ತು ಸಾಧನೆ ಯಾವ ಯುವಕರಿಗೂ ಆದರ್ಶವಾಗಿತ್ತು.
ನ್ಯಾಯಕೋರಿ ಬಂದವರಿಗೆ ರಕ್ಷಣೆ,
ಸಹಾಯ ಯಾಚಿಸಿದವರಿಗೆ ನೆರವಿನ ಅಭಯ ಹಸ್ತ, ವಾರ್ಧಕ್ಯ ಪೀಡಿತರಿಗೆ ಗೌರವ ಧನದ ಮೂಲಕ ಸಾಂತ್ವನ,
ಸಮಕಾಲೀನರೊಂದಿಗೆ ವಿವೇಕಪೂರ್ಣ ಮಿತೃತ್ವ,
ಆಲಿಂ ಹಾಗೂ ಮಾನ್ಯ ವ್ಯಕ್ತಿಗಳೊಂದಿಗೆ ಗೌರವದ ವಿಧೇಯತೆ,ಸಮಾಜಕ್ಕೆ ಸಹಕಾರಿಯಾಗಬಲ್ಲ ವಿಚಾರವಂತಿಕೆ.
ಮುಂತಾದ ಧ್ಯೇಯ,ಧೋರಣೆಗಳೊಂದಿಗೆ ದೀನೀ ರಂಗದಲ್ಲಿ ಪ್ರಕಾಶಮಾನವಾಗಿ ಬೆಳಗಿದ ಅವರು ಹಲವು ದೀನೀ ಸ್ಥಾಪನೆಗಳ ಪ್ರತಿಷ್ಠಾಪಕರಾಗಿದ್ದರು.
ಹೆಣ್ಣು ಮಕ್ಕಳ ಶಿಕ್ಷಣ ರಂಗದಲ್ಲಿ ಕ್ರಾಂತಿಯನ್ನೇ ಸೃಷ್ಠಿಸಿರುವ ಪ್ರತಿಷ್ಠಿತ ಕುಂಬ್ರ ಮರ್ಕಝುಲ್ ಹುದಾ ವಿಮೆನ್ಸ್ ಕಾಲೇಜಿಗೆ ತನ್ನ ಅತ್ಯಮೂಲ್ಯ ಒಂದು ಎಕ್ರೆ ಸ್ಥಳವನ್ನು ದಾನ ಮಾಡಿರುವ ಹಾಜಿಯವರು ಕುಂಬ್ರದ ಇನ್ನೊಂದು ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಕರ್ನಾಟಕ ಇಸ್ಲಾಮಿಕ್ ಸೆಂಟರ್ ನ ಪ್ರಾರಂಭದ ಕಟ್ಟಡಕ್ಕೂ ಸ್ಥಳ ದಾನ ಮಾಡಿದ್ದರು.
ಶಿಕ್ಷಣ ರಂಗದ ರೂವಾರಿಗಳನ್ನು ಬಹಳವಾಗಿ ಪ್ರಶಂಸಿಸುತ್ತಾ ಗೌರವಿಸುತ್ತಾ
ಖ್ಯಾತ ಶಿಕ್ಷಣ ಪ್ರೇಮಿಯಾಗಿ ಪ್ರಜ್ವಲಿಸುತ್ತಿದ್ದ ಹಾಜಿಯವರು ಎಂದೂ ಜನರ ಪ್ರಶಂಸೆಯನ್ನು ಬಯಸಿದವರಲ್ಲ.



ಒಬ್ಬ ಮನುಷ್ಯ ಹುಟ್ಟಿದ ನಂತರ ಮರಣ ಹೊಂದುವ ತನಕ ತನ್ನ ಜೀವನ ಚಕ್ರದಲ್ಲಿ ದಾಟಬೇಕಾದ ಎಲ್ಲಾ ಮಜಲುಗಳನ್ನು ಅತ್ಯಂತ ಯಶಸ್ವಿಯಾಗಿ ದಾಟಿ ಬಂದು ತನ್ನ ಸಂತೃಪ್ತ ಬಾಳಿನ ಕೊನೆಯಲ್ಲಿ ಆ ಪವಿತ್ರ ರಮಲಾನ್ ತಿಂಗಳಿನ 21 ನೇ ದಿನದ ಮಧ್ಯರಾತ್ರಿ ಸದ್ದಿಲ್ಲದೆ ಇನ್ನಿಲ್ಲವಾಗಿದ್ದರು.

ಪುರಾತನ ಶೇಕಮಲೆ ಮಸೀದಿಯ ಪ್ರಪ್ರಥಮ ನಿರ್ಮಾತೃ ಮರ್ಹೂಂ ಶೇಕಮಲೆ ಮುಹಿಯುದ್ದೀನ್ ಎಂಬ ಮಹಾನುಭಾವರ ಮಗಳ ಮಗನಾಗಿ, ಖ್ಯಾತ ದೀನೀ ತರವಾಡು ಕುಟುಂಬದಲ್ಲಿ ಜನಿಸಿದ ಮಮ್ಮುಂಞಿ ಹಾಜಿಯವರು ಸ್ವಪರಿಶ್ರಮದಿಂದ ದೂರದ ಊರಿಗೆ ಕಾಲ್ನಡಿಗೆಯಲ್ಲಿಯೇ ತೆರಳಿ ವಿದ್ಯಾರ್ಜನೆಗೈದು ಜೀವನದಲ್ಲಿ ಸರಳತೆ,ಅಪ್ರತಿಮ ವಿವೇಕ ನಿರಂತರ ಕ್ರೀಯಾಶೀಲತೆ ,ನ್ಯಾಯಯುತ ಕಾರ್ಯಗಳಲ್ಲಿ ಬಿಟ್ಟು ಕೊಡದ ವ್ಯಕ್ತಿತ್ವ,ಮುಂತಾದವುಗಳನ್ನು ತನ್ನದಾಗಿಸಿಕೊಂದಿದ್ದರು..
ಹಲವಾರು ವರ್ಷಗಳ ಕಾಲ ತನ್ನ ಊರಾದ ಶೇಕಮಲೆ ಜಮಾಅತ್ ನ ಅಧ್ಯಕ್ಷರಾಗಿ, ಸುತ್ತು ಮುತ್ತಲಿನ ಹಲವಾರು ಮಸೀದಿಗಳ,ಸ್ಥಾಪನೆಗಳ ಗೌರವ ಸಲಹೆಗಾರರಾಗಿ, ಪೋಷಕರಾಗಿ ಸೇವೆ ಸಲ್ಲಿಸಿದ್ದ ಅವರು ಎಂದೂ ತನ್ನನ್ನು ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಟ್ಟವರಲ್ಲ.
ಅವರು ನೀಡುತ್ತಿದ್ದ ಪ್ರತಿಯೊಂದು ತೀರ್ಮಾನಗಳೂ ತುಂಬಾ ಮುಂದಾಲೋಚನೆಯಿಂದ ಕೂಡಿತ್ತು ಮಾತ್ರವಲ್ಲ ಸಂದರ್ಬೋಚಿತವೂ ನ್ಯಾಯೋಚಿತವೂ ಆಗಿತ್ತು
ಆದ್ದರಿಂದ ಎಲ್ಲರೂ ಅವರ ನಾಯಕತ್ವವನ್ನು ಒಕ್ಕೊರಲಿನಿಂದ ಅಂಗೀಕರಿಸುತ್ತಿದ್ದರು
ಅವರ ಅನುಭವದ ಹಿತ ನುಡಿಗಳೇ ಅಮೃತವಾಗಿದ್ದರಿಂದ ಎಲ್ಲರೂ ಅಪಾರ ಗೌರವಾದರಗಳಿಂದ ಕಾಣುತ್ತಿದ್ದರು

ಸ್ವತಃ ಕೃಷಿಕನೂ ಖ್ಯಾತ ಅಡಿಕೆ ವ್ಯಾಪಾರಿಯೂ ಆಗಿದ್ದು ಕೊಡುಗೈ ದಾನಿಯಾಗಿದ್ದ ಹಾಜಿಯವರು
ಎರಡು ಬಾರಿ ಪತ್ನಿ ಸಮೇತರಾಗಿ ಮತ್ತು ಒಂದು ಬಾರಿ ಏಕಾಂಗಿಯಾಗಿ ಒಟ್ಟು ಮೂರು ಬಾರಿ ಪವಿತ್ರ ಹಜ್ ಯಾತ್ರೆ ಕೈಗೊಂಡಿದ್ದರು.

ಮರಣದ ಮುನ್ಸೂಚನೆ.!!

ತಾನು ಹೆಚ್ಚು ಕಾಲ ಇರಲಿಕ್ಕಿಲ್ಲ
ಇದೇ ರೀತಿ ಮುಂದುವರಿಯುತ್ತಾ ಒಂದು ದಿನ ದಿಢೀರ್ ಆಗಿ ಮರಣ ಹೊಂದಲಿಕ್ಕಿದೆ ಅಂತ ಒಂದು ತಿಂಗಳ ಹಿಂದೆ ಅಂದು ಶೇಕಮಲೆಯ ಸದರ್ ಮುಅಲ್ಲಿಂ ಆಗಿದ್ದ ಈಗ ಉಳ್ಳಾಲದಲ್ಲಿ ವಾಸಿಸುತ್ತಿರುವ ನಮ್ಮೆಲ್ಲರ ಪ್ರೀತಿಯ ಗೌರವಾನ್ವಿತ ಗುರುವರ್ಯ ಎಂ ಕೆ ಎಂ ಸಾದಿಕ್ ಮುಸ್ಲಿಯಾರ್ ಅವರಲ್ಲಿ ಹೇಳಿದ್ದರು.!!

ಯಾವ ಊರಲ್ಲಿ ಇದ್ದರೂ ಆಝಾನ್ ಆದ ತಕ್ಷಣ ಇಮಾಮ್ ಜಮಾಅತ್ ಗೆ ತಪ್ಪದೇ ಹಾಜರಾಗುತ್ತಿದ್ದ ಹಾಜಿಯವರು ರಮಲಾನಿನ ಇಪ್ಪತ್ತು ರಾತ್ರಿಗಳಲ್ಲಿಯೂ ತರಾವೀಹ್ ನಲ್ಲಿ ಭಾಗವಹಿಸಿ ಶೇಕಮಲೆ ಮಸೀದಿಯಲ್ಲಿ ಪ್ರಥಮ ಸಫ್ಫ್ ನ ತನ್ನ ಮಾಮೂಲಿ ಸ್ಥಳವಾದ ಮಿಂಬರ್ ಮತ್ತು ಮಿಹ್ ರಾಬ್ ನ ಮದ್ಯದ ಸ್ಥಳದಲ್ಲಿ ನಿಂತೋ ಕುಳಿತೋ ನಮಾಜ್ ನಿರ್ವಹಿಸಿ ಬಳಿಕ ನಡೆಯುವ ಹತ್ತು ನಿಮಿಷಗಳ ಉರ್ದಿ ಮುಗಿದ ಬಳಿಕವಷ್ಟೇ ಮನೆಗೆ ತೆರಳುತ್ತಿದ್ದರು…

ಇಪ್ಪತ್ತೊಂದು ವರ್ಷಗಳ ಹಿಂದಿನ ಅಂದಿನ ರಮಲಾನಿನ ಇಪ್ಪತ್ತೊಂದನೆಯ ರಾತ್ರಿಯೂ ಎಂದಿನಂತೆ ಉರ್ದಿ ಮುಗಿದು ಬಳಿಕ ಮುಸಲ್ಲ ಗೆ ಹಾಕಲು ಹಣ ತರಲು ಮರೆತು ಹೋಗಿದ್ದರಿಂದ ಅಂದು ಶೇಕಮಲೆ ಜಮಾಅತ್ ಕಾರ್ಯದರ್ಶಿಯಾಗಿದ್ದ
ಮರ್ಹೂಂ ಶೇಕಮಲೆ ಮಹಮ್ಮದ್ ಹಾಜಿ (ಸೆಕ್ರೆಟರಿ ಕುಂಚ) ರವರಲ್ಲಿ 10 ರೂಪಾಯಿ ಕೇಳಿದರು
ಮಹಮ್ಮದ್ ರವರು ತನ್ನ ಜೇಬಿನಿಂದ ಹತ್ತು ರೂಪಾಯಿ ಕೊಟ್ಟಾಗ ಅದನ್ನು ಹಾಜಿಯವರಿಗೆ ಮಸೀದಿಯಿಂದ ಕೊಡಲಿಕ್ಕಿರುವ ಹಣದಿಂದ ಕಳೆಯಲು ಸೂಚಿಸಿದರು

ಪರವಾಗಿಲ್ಲ

ಹತ್ತು ರೂಪಾಯಿ ಅಲ್ಲವೇ
ನನ್ನ ಲೆಕ್ಕದಲ್ಲಿ ಕೊಡುತ್ತೇನೆ
ನಾಳೆ ನನಗೆ ವಾಪಸ್ ಕೊಡಿ ಅಂತ ಮಹಮ್ಮದ್ ರವರು ಹೇಳಿದಾಗ

“ಬೇಡ… ಬೇಡ”
“ಒಂದು ವೇಳೆ ಬೆಳಗಾಗುವುದರೊಳಗೆ ನಾನು ತೀರಿಕೊಂಡರೆ ಸಾಲಗಾರನಾಗಿ ಮರಣ ಹೊಂದುವುದಿಲ್ಲವೇ..? ಎಂದು ಪ್ರಶ್ನಿಸಿ ತನಗೆ ಬರಲಿಕ್ಕಿರುವ ಹಣದಿಂದಲೇ ಹತ್ತು ರೂಪಾಯಿ ಪಡೆದುಕೊಂಡಿದ್ದರು”

ಅಂದೇ ಮದ್ಯ ರಾತ್ರಿ ಹಾಜಿಯವರು ತೀವ್ರ ಬಳಲಿಕೆಗೆ ಒಳಗಾದರು
ಕೂಡಲೇ ಕಾರ್ಯ ಪ್ರವೃತ್ತರಾದ ಅರಿಯಡ್ಕ ಪಿ.ಎಂ.ಅಬ್ದುಲ್ ರಹಿಮಾನ್ ಹಾಜಿಯವರು ಆ ಮದ್ಯ ರಾತ್ರಿಯಲ್ಲೂ ವೈದ್ಯ ಡಾಕ್ಟರ್ ಅಶೋಕ್ ಕುಮಾರ್ ರೈ ಯವರನ್ನು ಕರೆದುಕೊಂಡು ಬಂದಿದ್ದರು ಆದರೆ ವಿಧಿಯ ಲೀಲೆಯನ್ನು ತಡೆಯಲು ಹೇಗೆ ತಾನೆ ಸಾಧ್ಯ.!?

ಸುಬುಹಾನಲ್ಲಾಹ್

ಮಮ್ಮುಂಞಿ ಹಾಜಿಯವರ ರೂಹ್ ಹೊರಟು ಹೋಗಿತ್ತು
(ಇನ್ನಾ ಲಿಲ್ಲಾಹ್)

ಆ ನಿಮಿಷದಿಂದಲೇ ಜನಪ್ರವಾಹ ಶೇಕಮಲೆ ಕಡೆಗೆ ಹರಿಯತೊಡಗಿ ಪುತ್ತೂರಿನ ಇತಿಹಾಸದ ಪುಟಗಳಲ್ಲಿ ಒಂದು ದಾಖಲೆಯನ್ನು ನಿರ್ಮಿಸಿತ್ತು
ಗುರುವಾರ ಸಂಜೆ ಮೂರು ಗಂಟೆ ಹೊತ್ತಿಗೆ
ಸ್ವತಃ ಹಾಜಿಯವರೇ ತಂದು ಇಟ್ಟಿದ್ದ ಬಿಳಿ ವಸ್ತ್ರದಲ್ಲಿ ಕಫನ್ ಮಾಡಿ ಶೇಕಮಲೆ ಮದ್ರಸದ ಮಗ್ಗುಲಲ್ಲಿರುವ ಹಾಜಿಯವರ ಸ್ವಂತ ನಿವೇಶನದಲ್ಲಿ ದಫನ ಮಾಡಲಾಯ್ತು.

ಅಂದಿನ ದಿನಗಳಲ್ಲಿ ಶೇಕಮಲೆ ಮಸೀದಿಯ ಖಬರ್ ಸ್ಥಾನದಲ್ಲಿ ದಫನ್ ಮಾಡುವಾಗ ಖಬರ್ ಮುಚ್ಚಲು (ತಾಯೆ ಖಬರ್) ಕೆಂಪು ಕಲ್ಲುಗಳನ್ನು ಉಪಯೋಗಿಸಲಾಗುತ್ತಿತ್ತು

ಹಾಜಿಯವರ ತಮ್ಮ ಮರ್ಹೂಂ ಕುಂಬ್ರ ಕುಂಞಿ ಹಾಜಿಯವರ ಕಿರಿಯ ಪುತ್ರನೂ, ಶೇಕಮಲೆ ಜಮಾಅತ್ ಉಪಾದ್ಯಕ್ಷರೂ,
ಈ ಬರೆಯುತ್ತಿರುವ ನಾನು ದುಡಿಯುತ್ತಿರುವ ಪುತ್ತೂರಿನ ಪ್ರತಿಷ್ಠಿತ ಆಕರ್ಷನ್ ಸಂಸ್ಥೆಯ ಮಾಲಕರೂ
ಯುವ ಉದ್ಯಮಿಯೂ ಆದ
ಕೆ ಪಿ ಸಾದಿಕ್ ಹಾಜಿಯವರು ನನಗೆ ಹೇಳಿದರು
ದೊಡ್ಡಪ್ಪನ ಖಬರ್ ಮುಚ್ಚಳು
ಫ್ಯಾಕ್ಟರಿಯಿಂದ ಸ್ಲ್ಯಾಬ್ ಕಲ್ಲು ಕಳುಹಿಸು.

ಅಲ್ಲಿ ಕೆಂಪು ಕಲ್ಲು ಉಂಟಲ್ವಾ.
ನಾನು ಹೇಳಿದಾಗ

ಅದು ಬೇಡ
ಸ್ಲ್ಯಾಬ್ ಕಲ್ಲು ಕಳುಹಿಸು ಅಂದರು

ಯಾಕೋ ಏನೋ ಒಂಥರಾ ಆಶ್ಚರ್ಯವಾದಂತೆ ಭಾಸವಾಯಿತು

ಸರಿ,
ಮರು ಪ್ರಶ್ನೆ ಕೇಳದೆ
ನಾನು ಸ್ಲ್ಯಾಬ್ ಕಲ್ಲು ಕಳುಹಿಸಿದೆ

ಅದೇ ಸ್ಲ್ಯಾಬ್ ಕಲ್ಲಿನಿಂದ ಹಾಜಿಯವರ ಖಬರ್ ಮುಚ್ಚಲಾಯಿತು.

ಮೂರು ದಿವಸ ಬಿಟ್ಟು ಹಾಜಿಯವರ ಓರ್ವ ಮಗ ಹೇಳಿದ

ನನ್ನ ಖಬರ್ ಗೆ ಸ್ಲ್ಯಾಬ್ ಕಲ್ಲಿನಿಂದಲೇ ಮುಚ್ಚಬೇಕು ಅಂತ ತಂದೆಯವರು ವಸಿಯ್ಯತ್ ಬರೆದು ಇಟ್ಟಿದ್ದಾರೆ..

ಮೊನ್ನೆ ಎಲ್ಲಾ ಹುಡುಕಿದ್ದೇವೆ
ವಸಿಯ್ಯತ್ ಬರೆದ ಹಲವು ಪುಸ್ತಕಗಳು ಸಿಕ್ಕಿವೆ
ಈ ಕಾಗದ ಮಾತ್ರ ಈವತ್ತು ಸಿಕ್ಕಿದ್ದು.!

ಸುಬುಹಾನಲ್ಲಾಹ್..!!

ಕಾಗದ ಸಿಗುವಾಗ ತಡವಾಗಿದ್ದರೂ
ಅಲ್ಲಾಹು ಮಾತ್ರ ಹಾಜಿಯವರ ಎಲ್ಲಾ ಅಭಿಲಾಷೆಗಳನ್ನೂ ನೆರವೇರಿಸಿದ್ದ..!!!!

ಖ್ಯಾತ ಕುಂಜತ್ತೂರು ತರವಾಡಿನ ಫಕ್ರುದ್ದೀನ್ ಹಾಜಿ ಎಂಬವರ ಮಗಳು
ಹಜ್ಜುಮ್ಮ ಖದೀಜಮ್ಮ ಎಂಬ ಮಹಿಳೆಯನ್ನು ವಿವಾಹವಾಗಿದ್ದ ಹಾಜಿಯವರ ದಾಂಪತ್ಯ ಜೀವನದಲ್ಲಿ ಅಲ್ಲಾಹು ಹನ್ನೆರಡು ಮಂದಿ ಮಕ್ಕಳನ್ನು ಕರುಣಿಸಿದ

ಕುಂಬ್ರ ಮರ್ಕಝುಲ್ ಹುದಾ ಕಾಲೇಜಿನ ಉಪಾಧ್ಯಕ್ಷರೂ
ಶೇಕಮಲೆ ಜಮಾಅತ್ ಅಧ್ಯಕ್ಷರೂ ಆಗಿರುವ
ಹಿರಿಯ ಪುತ್ರ, ಉದ್ಯಮಿ
ಎಸ್ ಎಂ ಅಹ್ಮದ್ ಬಶೀರ್ ಹಾಜಿ

ಶೇಕಮಲೆ ಜಮಾಅತ್ ಮಾಜಿ ಅಧ್ಯಕ್ಷರಾಗಿರುವ
ಉದ್ಯಮಿ ಎಸ್ ಎಂ ಸಿದ್ದೀಕ್ ಹಾಜಿ

ಇಂಜಿನಿಯರ್ ಎಸ್ ಎಂ ಫಾರೂಕ್ ಬಹರೈನ್

ಶೇಕಮಲೆ ಜಮಾಅತ್
ಕಾರ್ಯಾಧ್ಯಕ್ಷರಾಗಿರುವ ಇನ್ನೋರ್ವ ಉದ್ಯಮಿ
ಎಸ್ ಎಂ ಸುಲೈಮಾನ್ ಹಾಜಿ

ಇಂಜಿನಿಯರ್ ಶೈಕ್ ಅಬ್ದುಲ್ಲಾಹ್ ಹಾಜಿ

ಸೇರಿದಂತೆ ಐವರು ಗಂಡು ಮಕ್ಕಳು

ಮತ್ತು ಏಳು ಹೆಣ್ಣು ಮಕ್ಕಳ ಜವಾಬ್ದಾರಿಯುತ ತಂದೆಯಾಗಿದ್ದ ಹಾಜಿಯವರು
ತನ್ನೆಲ್ಲಾ ಗಂಡು ಮಕ್ಕಳನ್ನು
ವಿದ್ಯಾ ಸಂಪನ್ನರೂ ದೀನೀ ಖಾದಿಮ್ ಗಳನ್ನಾಗಿಸಿದ ಸೌಭಾಗ್ಯವಂತ.

ಮಾತ್ರವಲ್ಲ ತನ್ನೆಲ್ಲಾ ಹೆಣ್ಣು ಮಕ್ಕಳನ್ನು ಕುಲೀನ ಮನೆತನದ ಅಳಿಯಂದಿರಿಗೆ ತನ್ನ ಜೀವಿತ ಕಾಲಾವಧಿಯಲ್ಲಿಯೇ ಮದುವೆ ಮಾಡಿಸಿದ್ದರು.

ಎಂಬತ್ತು ವರುಷಗಳ ಉದಾತ್ತ ಜೀವನ ಸಾಗಿಸಿದ ಮಮ್ಮುಂಞಿ ಹಾಜಿಯವರು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶ ನಮ್ಮಿಂದ ಎಂದೆಂದಿಗೂ ದೂರವಾಗಲಾರದು.

ಹಾಜಿಯವರಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದಿ ಜೀವನದ ಲ್ಲಿ ಅಲ್ಪವನ್ನಾದರೂ ಅಳವಡಿಸಿ ಕೊಂಡರೆ ಅದು ಬೆಳೆದು ಬರುತ್ತಿರುವ ಯವ ಪೀಳಿಗೆಯ ಚಾರಿತ್ರ್ಯ ನಿರ್ಮಾಣದಲ್ಲಿ ಬಹಳಷ್ಟು ಪ್ರಭಾವ ಬೀರಲಿದೆ ಎಂಬುದರಲ್ಲಿ ಸಂದೇಹವಿಲ್ಲ

ಅವರೊಂದಿಗೆ ಅಲ್ಲಾಹು ನಮ್ಮೆಲ್ಲರನ್ನೂ ಸ್ವರ್ಗೋದ್ಯಾನದಲ್ಲಿ ಒಟ್ಟು ಗೂಡಿಸಲಿ ಆಮೀನ್.

ಶಿಕ್ಷಣದ ಕುರಿತಂತೆ ಅವರ ಧ್ಯೇಯ ವಾಕ್ಯವನ್ನು ಮಗದೊಮ್ಮೆ ಪುನರುಚ್ಚರಿಸುತ್ತಾ ಅದನ್ನು ಕಾರ್ಯಗತಗೊಳಿಸಲು ಕಟಿಬದ್ದರಾಗೋಣ..ಇನ್ಶಾ ಅಲ್ಲಾಹ್..

ಕಲಿಯಿರಿ! ಕಲಿಸಿರಿ!! ಇಹಪರಗಳಲ್ಲಿ ವಿಜಯಗಳಿಸಿರಿ…

By dtv

Leave a Reply

Your email address will not be published. Required fields are marked *

error: Content is protected !!