ಮಂಗಳೂರು: ಬಲ್ಲಾಳ್‌ಭಾಗ್ ಬಳಿ ಏ.9ರಂದು ನಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟದಲ್ಲಿದ್ದ ಗಾಯಾಳು ಮಹಿಳೆಯ ಮೆದುಳು ನಿಷ್ಕ್ರಿಯಗೊಂಡಿರುವ ಹಿನ್ನೆಲೆಯಲ್ಲಿ ಈಕೆಯ ಅಂಗಾಂಗ ದಾನ ಮಾಡಲು ಮನೆ ಮಂದಿ ನಿರ್ಧರಿಸಿದ್ದಾರೆ.
ಗಾಯಾಳು ಮಹಿಳೆ ಪ್ರೀತಿ ಮನೋಜ್ ಕಲ್ಯಾ ಅಂಗಾಂಗ ದಾನ ಮಾಡುವ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗಿದ್ದಾರೆ.
ಏ.9ರಂದು ನಗರದ ಪಿವಿಎಸ್ ಕಡೆಯಿಂದ ಲಾಲ್‌ಭಾಗ್ ಕಡೆಗೆ ಅತೀ ವೇಗದಿಂದ ಶ್ರವಣ್ ಕುಮಾರ್ ಎಂಬಾತ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಬಿಎಂಡಬ್ಲ್ಯೂ ಕಾರು ರಸ್ತೆ ವಿಭಾಜಕ್ಕೆ ಢಿಕ್ಕಿ ಹೊಡೆದು ವಿರುದ್ಧ ರಸ್ತೆಗೆ ಹಾರಿದೆ.
ಈ ವೇಳೆ ಆ ರಸ್ತೆಯಲ್ಲಿ ಬರುತ್ತಿದ್ದ ಸ್ಕೂಟಿಗೆ ಢಿಕ್ಕಿ ಹೊಡೆದು ಸ್ಕೂಟಿ ಹಿಂದಿನಿಂದ ಬರುತ್ತಿದ್ದ ಕಾರಿಗೆ ಅಪ್ಪಳಿಸಿದೆ ಅಪಘಾತದ ರಭಸಕ್ಕೆ ಮಹಿಳೆ ಹೆಲ್ಮೆಟ್ ಧರಿಸಿದ್ದರೂ ಎರಡೂ ಕಾರಿನ ಮಧ್ಯೆ ಸಿಕ್ಕಿ ತಲೆಗೆ ಗಂಭೀರ ಗಾಯವಾಗಿತ್ತು.
ಆಗ ಸ್ಥಳದಲ್ಲಿದ್ದ ಸಾರ್ವಜನಿಕರು ಆಕ್ರೋಶಗೊಂಡು ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಚಾಲಕ ಶ್ರವಣ್ ಕುಮಾರ್‌ನನ್ನು ಕಾರಿನಿಂದ ಎಳೆದು ಮನಬಂದಂತೆ ಥಳಿಸಿದ್ದರು.
ಇದೇ ಅಪಘಾತದಲ್ಲಿ ಡಿವೈಡರ್ ಮೇಲಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದರೆ ಹಾಗೂ ಮತ್ತೊಂದು ಕಾರಿನಲ್ಲಿದ್ದ ಅಮನ್ ಜಯದೇವನ್ ಎಂಬ ಎಳು ವರ್ಷದ ಮಗು ಸಹ ಗಾಯಗೊಂಡಿದ್ದರು.
ಆರೋಪಿ ಶ್ರವಣ್ ಕುಮಾರ್ ವಿರುದ್ಧ ಅತೀ ವೇಗ ಮತ್ತು ನಿರ್ಲಕ್ಷ್ಯ ಚಾಲನೆ ಮಾಡಿದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆ 308ರ ಅಡಿಯಲ್ಲಿ ಕಲಂ 279, 337, 338ರ ಅನ್ವಯವೂ ಪ್ರಕರಣಗಳನ್ನು ದಾಖಲಿಸಿ ಬಂಧನ ಮಾಡಲಾಗಿತ್ತು.
ಅಂದು ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪ್ರೀತಿ ಮನೋಜ್ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ 14 ದಿನಗಳ ಜೀವನ್ಮರಣದ ಹೋರಾಟದಲ್ಲಿದ್ದ ಆಕೆಯ ಮೆದುಳು ನಿಷ್ಕ್ರಿಯಗೊಂಡಿದ್ದು, ಇದೀಗ ಮನೆ ಮಂದಿ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ.
ದೇವರ ವಿಧಿ. ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ದೇವರು ಕೊಡಲಿ.