ಮಂಗಳೂರು: ಆದಿವಾಸಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರಿಪಳ್ಳ ಗ್ರಾಮದಲ್ಲಿ ನಡೆದಿದೆ.
ಜಮೀನು ವಿವಾದದ ಹಿನ್ನೆಲೆ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಪ್ರಕರಣ ಸಂಬಂಧ ಬಿಜೆಪಿ ನಾಯಕ ಸೇರಿದಂತೆ ಸುಮಾರು 9 ಜನರ ವಿರುದ್ಧ ಕೇಸ್ ದಾಖಲಾಗಿದೆ. ಸಂದೀಪ್, ಸಂತೋಷ್, ಗುಲಾಬಿ, ಕುಸುಮಾ, ಲೋಕಯ್ಯ, ಸುಗುಣ, ಅನಿಲ್, ಲಲಿತಾ, ಚನ್ನಕೇಶವ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 323, 324, 504, 354, ಐಪಿಸಿ ಸೆಕ್ಷನ್ 354(B), 506, 149ರಡಿ ಪ್ರಕರಣ ದಾಖಲಾಗಿದೆ.
ಬಿಜೆಪಿ ST ಮೋರ್ಚಾ ಅಧ್ಯಕ್ಷ ಸೇರಿ ಹಲವರಿಂದ ಕೃತ್ಯ ಆರೋಪ:
ಆದಿವಾಸಿ ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ವಿಡಿಯೋ ಸೆರೆಯಾಗಿದೆ. ಹಲ್ಲೆಗೊಳಗಾದ ಮಹಿಳೆ ಕುಟುಂಬ 94ಸಿ ಅಡಿ ಅರ್ಜ ಸಲ್ಲಿಸಿದ್ದರು. ಜಾಗ ಅಳತೆ ಮಾಡಲೆಂದು ಅಧಿಕಾರಿಗಲೂ ಸಹ ಬಂದಿದ್ದರು. ಜಾಗದ ಸಂಬಂಧ ಇನ್ನೊಂದು ತಂಡ ತಕರಾರು ತೆಗೆದಿದ್ದರು. ಇದರಿಂದ ಅಧಿಕಾರಿಗಳು ಅಳತೆ ಸಾಧ್ಯವಿಲ್ಲವೆಂದು ಹಿಂದಿರುಗಿದ್ದರು. ಅಧಿಕಾರಿಗಳು ತೆರಳಿದ ನಂತರ ಆದಿವಾಸಿ ಮಹಿಳೆ ಮೇಲೆ ಹಲ್ಲೆ ನಡೆದಿದೆ. ಬಿಜೆಪಿ ST ಮೋರ್ಚಾ ಅಧ್ಯಕ್ಷ ಸೇರಿ ಹಲವರಿಂದ ಕೃತ್ಯ ನಡೆದಿರುವ ಆರೋಪ ಇದೆ.