ಅಂಬಾಲಪುಳ: ಸೌದಿ ಅರೇಬಿಯಾದಲ್ಲಿ ಕೆಲಸ ಸಿಕ್ಕ ಖುಷಿಯಲ್ಲಿ ಮಹಿಳೆಯೊಬ್ಬಳು ಕುಟುಂಬಸ್ಥರ ಸಮೇತ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಕಾರು ಭೀಕರ ಅಪಘಾತಕ್ಕೀಡಾಗಿ ಆಕೆಯ ಪತಿ, 12 ವರ್ಷದ ಮಗು ಸೇರಿ 4 ಮಂದಿ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಕೇರಳದ ಅಂಬಾಲಪುಳ ನಡೆದಿದೆ.
ತಿರುವನಂತಪುರದ ಅನಾಡ್ ಮೂಲದ ಶೈನಿ ಎಂಬ ಮಹಿಳೆಗೆ ಸೌದಿಯ ಆಸ್ಪತ್ರೆಯೊಂದರಲ್ಲಿ ಕೆಲಸ ಸಿಕ್ಕಿತ್ತು. ಅದರ ಆಫರ್ ಲೆಟರ್ ಜೊತೆ ಸೌದಿಗೆ ಹೊರಟಿದ್ದರು. ಶೈನಿ ಅವರನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿ ಬರಲೆಂದು ಆಕೆಯು ಕುಟುಂಬವೂ ಕೂಡ ಬಿಟ್ಟು ಬರಲು ಜೊತೆಗೆ ಹೊರಟಿದ್ದರು.

ಬೆಳಗ್ಗೆ 5 ಗಂಟೆ ಸುಮಾರಿಗೆ ನೆಡುಂಬಸ್ಸೆರಿ ವಿಮಾನ ನಿಲ್ದಾಣದ ಕಡೆ ಹೋಗುವಾಗ ಅಂಬಾಲಪುಳ ಬಳಿ ಶೈನಿ ಮತ್ತು ಅವರ ಕುಟುಂಬದವರಿದ್ದ ಕಾರು ಎದುರಿಗೆ ಬರುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ.
ಅಪಘಾತದ ತೀವ್ರತೆಗೆ ಶೈನಿ ಹೊರತುಪಡಿಸಿ ಆಕೆಯ ಪತಿ, ಮಗ ಮತ್ತು ಸಹೋದರ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಶೈನಿ ಅವರನ್ನು ತಿರುವನಂತಪುರದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟವರನ್ನು ಶೈನಿ ಪತಿ ಸುಧೀಶ್ ಲಾಲ್ (37), ಮಗ ನಿರಂಜನ್ (12), ಸಹೋದರ ಶೈಜು (34) ಮತ್ತು ಸುಧೀಶ್ ಸೋದರಸಂಬಂಧಿ ಅಭಿರಾಗ್ (27) ಎಂದು ಗುರುತಿಸಲಾಗಿದೆ.
ಗಾಯಗೊಂಡಿದ್ದ ಶೈನಿ ಅವರನ್ನು ಮೊದಲು ಅಲಪ್ಪುಳ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆಂದು ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೈನಿಗೆ ಸೌದಿಯ ಆಸ್ಪತ್ರೆಯೊಂದರಲ್ಲಿ ಕೆಲಸದ ಆಫರ್ ಬಂದಿತ್ತು. ಕುಟುಂಬದ ಆರ್ಥಿಕ ಬಿಕ್ಕಟ್ಟನ್ನು ಕೊನೆಗಾಣಿಸಲು ವಿದೇಶಕ್ಕೆ ಹಾರಲು ಸಿದ್ಧತೆ ನಡೆಸಿದ್ದರು. ಆದರೆ, ವಿಧಿಯಾಟ ಬೇರೆಯೇ ಇತ್ತು. ಇದೀ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.




