dtvkannada

ಕುಂಬ್ರ: ಇಂದು ಇಸ್ಲಾಮಿಕ್ ಕ್ಯಾಲೆಂಡರ್ ಶವ್ವಾಳ್ 1 ಪ್ರಾರಂಭವಾದರಿಂದ ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ಈದ್-ಉಲ್-ಫಿತ್ರ್ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇದರ ಭಾಗವಾಗಿ ಕುಂಬ್ರ -ಶೇಖಮಲೆ ಜುಮಾ ಮಸೀದಿಯಲ್ಲಿ ಬಾಖವಿ ಉಸ್ತಾದರ ನೇತೃತ್ವದಲ್ಲಿ ಈದ್ ನಮಾಝ್ ಬೆಳಗ್ಗೆ ಗಂಟೆ 8:30ಕ್ಕೆ ನಡೆಯಿತು.

ಈದ್ ನಮಾಝ್ ನಂತರ ಉಸ್ತಾದರು ಖುತ್ಬಾ ಪಾರಾಯಣಗೈದು, ಈದ್ ಸಂದೇಶ ಹಂಚಿಕೊಂಡರು.
ಮಸೀದಿಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವುದು ಮುಗಿಯುತ್ತಲೇ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು

ಹಬ್ಬದ ವಿಶೇಷತೆ:
ಭಾರತವು ವಿವಿಧ ಧರ್ಮ, ಸಂಸ್ಕೃತಿ, ಸಂಪ್ರದಾಯ, ಜನಾಂಗಗಳು ಮತ್ತು ಆಚರಣೆಗಳಿಗೆ ನೆಲೆಯಾಗಿರುವ ದೇಶ. ಈ ಕಾರಣದಿಂದಾಗಿ, ಭಾರತದಲ್ಲಿ ವರ್ಷವಿಡೀ ಹಲವಾರು ಹಬ್ಬಗಳನ್ನು ಆಚರಿಸುತ್ತದೆ. ಸದ್ಯ ಮೇ 3ರಂದು ದೇಶಾದ್ಯಂತ ಮುಸ್ಲಿಮರು ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸುತ್ತಿದ್ದಾರೆ.

ಈದ್-ಉಲ್-ಫಿತರ್ ಇಸ್ಲಾಂ ಧರ್ಮದಲ್ಲಿ ಆಚರಿಸಲಾಗುವ ಪವಿತ್ರ ಹಬ್ಬಗಳಲ್ಲಿ ಒಂದು. ರಂಜಾನ್ನ 30 ದಿನಗಳ ಉದ್ದಕ್ಕೂ ಮುಸ್ಲಿಮರು ಉಪವಾಸ ಆಚರಿಸುವ ಮೂಲಕ ಈ ತಿಂಗಳನ್ನು ವರ್ಷದ ಪವಿತ್ರ ತಿಂಗಳಾಗಿಸುತ್ತಾರೆ. ಈ ತಿಂಗಳಲ್ಲಿ, ಇಸ್ಲಾಂ ಧರ್ಮವನ್ನು ಅನುಸರಿಸುವ ಮುಸ್ಲಿಮರು ಸೂರ್ಯೋದಯಕ್ಕೂ ಮುನ್ನ ಸೂರ್ಯಾಸ್ತಮಾನದವರೆಗೆ ಉಪವಾಸ ಇರುತ್ತಾರೆ.

ರಂಜಾನ್ ತಿಂಗಳಲ್ಲಿ ರೋಜಾ ಅಥವಾ ಉಪವಾಸಕ್ಕೆ ಅದರದೇ ಆದ ಮಹತ್ವವಿದೆ. ಸೂರ್ಯೋದಯಕ್ಕೆ ಮುಂಚಿನ ತಿಂಡಿಯನ್ನು ಸೋಹರ್ ಎಂದು ಕರೆಯಲಾಗುತ್ತದೆ ಮತ್ತು ಸೂರ್ಯಾಸ್ತದ ನಂತರ ಉಪವಾಸವನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಯನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ. ಇನ್ನು ರಂಜಾನ್ ಸಮಯದಲ್ಲಿ ಕೇವಲ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಉಪವಾಸ ಮಾಡಿಸಲಾಗುತ್ತದೆ. ಮುಸ್ಲಿಮರು ಉಪವಾಸದ ವೇಳೆ ಸಿಗರೇಟ್, ಮದ್ಯ, ತಂಬಾಕು ಸೇವನೆ, ಲೈಂಗಿಕ ಸಂಬಂಧವನ್ನು ಬೆಳೆಸುವುದನ್ನೂ ಕೂಡ ತಪ್ಪಿಸುತ್ತಾರೆ. ಏಕೆಂದರೆ ಉಪವಾಸದ ಸಮಯದಲ್ಲಿ ಇಂಥ ಚಟುವಟಿಕೆಗಳನ್ನು ಪಾಪ ಎಂದು ಪರಿಗಣಿಸಲಾಗುತ್ತದೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ತಮ್ಮನ್ನು ಅಧ್ಯಾತ್ಮ ಪ್ರವೃತ್ತಿಗೆ ಅರ್ಪಿಸಿಕೊಳ್ಳುತ್ತಾರೆ.

ಈದ್ ಹಬ್ಬವು ಚಂದ್ರನನ್ನು ನೋಡಿದ ನಂತರವೇ ಪ್ರಾರಂಭವಾಗುತ್ತದೆ. ಈದ್ ಉಲ್-ಫಿತರ್ ಉಪವಾಸದ ಅಂತ್ಯವನ್ನು ಸೂಚಿಸುತ್ತದೆ. ಪ್ರವಾದಿ ಮೊಹಮ್ಮದ್ ಅವರ ಬೋಧನೆಗಳ ದಾಖಲೆಯಾದ ಸುನ್ನತ್ ಅನ್ನು ಅನುಸರಿಸಿ, ಹಬ್ಬದಂದು ಮುಸ್ಲಿಮರು ಮುಂಜಾನೆ ಬೇಗನೆ ಎದ್ದು ತಮ್ಮ ಸಲಾತ್ ಉಲ್-ಫಜ್ರ್ (ದೈನಂದಿನ ಪ್ರಾರ್ಥನೆಗಳು) ಸಲ್ಲಿಸಿ, ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಇತ್ತರ್ (ಸುಗಂಧ ದ್ರವ್ಯ) ಧರಿಸುತ್ತಾರೆ. ಬಳಿಕ ಹಬ್ಬದ ಪ್ರಾರ್ಥನೆಗೆ ಹೋಗುವ ಮುನ್ನ ಮನೆಯಲ್ಲಿ ತಯಾರಿಸಿದ ಸಿಹಿ ತಿಂಡಿಯನ್ನು ಸೇವಿಸುತ್ತಾರೆ. ಹುಡುಗರು, ಯುವಕರು ಸೇರಿದಂತೆ ಈದ್ಗ ಬಳಿ ಎಲ್ಲಾ ಮುಸ್ಲಿಮರು ಒಟ್ಟಿಗೆ ಸೇರಿ ಹಬ್ಬದ ವಿಶೇಷ ಪ್ರಾರ್ಥನೆ ಮಾಡುತ್ತಾರೆ. ಆದ್ರೆ ಹೆಣ್ಣು ಮಕ್ಕಳು, ಮಹಿಳೆಯರು ಮನೆಯಲ್ಲೇ ಹಬ್ಬದ ನಮಾಜ್ ಮಾಡುತ್ತಾರೆ.

ಜನರು ಬೆಳಿಗ್ಗೆ ಸಿಹಿ ತಿನ್ನುವ ಮೂಲಕ ದಿನವನ್ನು ಪ್ರಾರಂಭಿಸಿದರೆ ಅದನ್ನು ನಿಜವಾಗಿಯೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಈದ್ ಅನ್ನು ಮೀಥಿ ಈದ್ ಎಂದು ಕರೆಯಲಾಗುತ್ತದೆ. ಫಿರ್ಣಿ ಮತ್ತು ಖೀರ್, ಶೀರ್ ಕುರ್ಮಾ ಮುಂತಾದ ಖಾದ್ಯಗಳನ್ನು ಎಲ್ಲಾ ಮನೆಗಳಲ್ಲಿ ತಯಾರಿಸಲಾಗುತ್ತದೆ. ಹೆಂಗಸರೂ ಕೈಗೆ ಗೋರಂಟಿ ಹಚ್ಚಿಕೊಂಡು ಹೊಸ ಬಟ್ಟೆ ಧರಿಸುತ್ತಾರೆ. ಈ ದಿನದಂದು ಮಕ್ಕಳು ತಮ್ಮ ಕುಟುಂಬದ ಹಿರಿಯರಿಂದ ಈದಿ (ಹಣ) ಪಡೆಯುತ್ತಾರೆ, ಇದು ಅವರಿಗೆ ಹಬ್ಬವನ್ನು ಹೆಚ್ಚು ವಿಶೇಷವಾಗಿಸುತ್ತದೆ. ತಿಂಗಳ ಉಪವಾಸದ ಅಂತ್ಯವನ್ನು ಗುರುತಿಸಲು, ಮನೆಗಳಲ್ಲಿ ಅದ್ದೂರಿ ಹಬ್ಬಗಳನ್ನು ಆಯೋಜಿಸಲಾಗುತ್ತದೆ.

By dtv

Leave a Reply

Your email address will not be published. Required fields are marked *

error: Content is protected !!