ಸುಳ್ಯ: ಕಳೆದ ಹದಿನೆಂಟು ವರ್ಷಗಳ ಹಿಂದೆ ಅಂದರೆ 2004 ರಲ್ಲಿ ಸುಳ್ಯ ಮರ್ಕಂಜ ಅಂಚೆ ಕಚೇರಿಯಲ್ಲಿ ಆರ್.ಡಿ ಮಾಡಿ ಅದನ್ನು ತೆಗೆದುಕೊಂಡು ವಂಚನೆ ಮಾಡಿದ ಆರೋಪಿ ಸುಳ್ಯ ನ್ಯಾಯಾಲಯಕ್ಕೆ ಇದೀಗ 18 ವರ್ಷಗಳ ಬಳಿಕ ಹಾಜರಾಗಿದ್ದಾರೆ.
ಸುಳ್ಯ ಮರ್ಕಂಜ ಗ್ರಾಮದಲ್ಲಿ ಈ ಹಿಂದೆ ವಾಸವಾಗಿದ್ದ ಭಾಸ್ಕರ ಯಾನೆ ಬಶೀರ್ ಮರ್ಕಂಜ ಗ್ರಾಮದ ಅಂಚೆ ಕಚೇರಿಯಲ್ಲಿ ಆರ್‌ಡಿ ಮಾಡಿ ಅದನ್ನು ತಾನೆ ತೆಗೆದು ವಂಚನೆ ಮಾಡಿದ ಬಗ್ಗೆ ಅಂಚೆ ನಿರೀಕ್ಷಕರಾದ ಲಕ್ಷ್ಮೀ ನಾರಾಯಣ ಎಂಬವರು ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದರು.
ಬಳಿಕ ಆರೋಪಿ ಭಾಸ್ಕರ ಯಾನೆ ಬಶೀರ್ ಈ ಹಿಂದೆ ಮರ್ಕಂಜದಲ್ಲಿ ನೆಲೆಸಿದ್ದ ಅಬೂಬಕ್ಕರ್ ಎಂಬವರ ಮಗಳ ಜತೆ ಮರ್ಕಂಜದಿಂದ ಪರಾರಿಯಾಗಿದ್ದರು.
ಆರೋಪಿ ಪತ್ತೆಗಾಗಿ ಸುಳ್ಯ ಎಸ್ಸೈ ದಿಲೀಪ್, ಎಸ್ಸೈ ಉದಯ ಭಟ್ ಮತ್ತು ಪಿಸಿ ಅನೀಲ್ ಕೇರಳದ ಕ್ಯಾಲಿಕಟ್ ತೆರಳಿದ್ದರು.
ಅಲ್ಲಿ ವಿಚಾರಿಸುವ ಸಂದರ್ಭದಲ್ಲಿ ಆರೋಪಿ ಮತಾಂತರಗೊಂಡು ಬಶೀರ್ ಎಂಬ ಹೆಸರಿನಲ್ಲಿ ಇರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.
ಕ್ಯಾಲಿಕಟ್‌ಗೆ ತೆರಳಿದ ಸಂದರ್ಭದಲ್ಲಿ ಆರೋಪಿ ಕ್ಯಾಲಿಕಟ್‌ನಿಂದ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ. ತನ್ನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂಬುದನ್ನು ತಿಳಿದ ಆರೋಪಿ ಏ.29ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.