ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 13 ರನ್ ಅಂತರದ ಗೆಲುವು ದಾಖಲಿಸಿದೆ.
ಈ ಮೂಲಕ ಸತತ ಮೂರು ಸೋಲುಗಳ ಬಳಿಕ ಬೆಂಗಳೂರು ಜಯದ ಹಾದಿಗೆ ಮರಳಿದೆ. ಅಲ್ಲದೆ ಆಡಿರುವ 11 ಪಂದ್ಯಗಳಲ್ಲಿ ಆರನೇ ಗೆಲುವಿನೊಂದಿಗೆ 12 ಒಟ್ಟು ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ಅತ್ತ ಸಿಎಸ್‌ಕೆ 10 ಪಂದ್ಯಗಳಲ್ಲಿ ಏಳನೇ ಸೋಲಿಗೆ ಶರಣಾಗಿದೆ. ಅಲ್ಲದೆ ಪ್ಲೇ-ಆಫ್ ಹಾದಿ ಕಠಿಣವೆನಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ಎಂಟು ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಚೆನ್ನೈ ಎಂಟು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಚೆನ್ನೈಗೆ ಮಗದೊಮ್ಮೆ ಓಪನರ್‌ಗಳಾದ ಋತುರಾಜ್ ಗಾಯಕವಾಡ್ ಹಾಗೂ ಡೆವೊನ್ ಕಾನ್ವೆ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 6.4 ಓವರ್‌ಗಳಲ್ಲಿ 54 ರನ್ ಪೇರಿಸಿದರು.
ಉತ್ತಮವಾಗಿ ಆಡುತ್ತಿದ್ದ ಗಾಯಕವಾಡ್ (28 ರನ್, 23 ಎಸೆತ) ವಿಕೆಟ್ ಶಾಬಾಜ್ ಅಹಮದ್ ಗಳಿಸಿದರು.
ಈ ಹಂತದಲ್ಲಿ ದಾಳಿಗಿಳಿದ ಗ್ಲೆನ್ ಮ್ಯಾಕ್ಸ್‌ವೆಲ್, ರಾಬಿನ್ ಉತ್ತಪ್ಪ (1) ಹಾಗೂ ಅಂಬಟಿ ರಾಯುಡು (10) ವಿಕೆಟ್ ಗಳಿಸಿ ಮಿಂಚಿದರು.
ಸಿಎಸ್‌ಕೆ 9.4 ಓವರ್‌ಗಳಲ್ಲಿ 75 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡಿತು.
ಇನ್ನೊಂದೆಡೆ ದಿಟ್ಟ ಹೋರಾಟ ತೋರಿದ ಕಾನ್ವೆ, 32 ಎಸೆತಗಳಲ್ಲಿ ಸತತ ಎರಡನೇ ಅರ್ಧಶತಕ ಗಳಿಸಿದರು. 15ನೇ ಓವರ್‌ನಲ್ಲಿ ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ಕಾನ್ವೆ ಅವರನ್ನು ವನಿಂದು ಹಸರಂಗ ಹೊರದಬ್ಬಿದರು. 37 ಎಸೆತಗಳನ್ನು ಎದುರಿಸಿದ ಕಾನ್ವೆ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು.
ಅಂತಿಮ 5 ಓವರ್‌ಗಳಲ್ಲಿ ಚೆನ್ನೈ ಗೆಲುವಿಗೆ 56 ರನ್ ಬೇಕಾಗಿತ್ತು. ಆದರೆ ಕೊನೆಯ ಹಂತದಲ್ಲಿ ಹರ್ಷಲ್ ಪಟೇಲ್ ಹಾಗೂ ಜೋಶ್ ಹ್ಯಾಜಲ್‌ವುಡ್ ಪರಿಣಾಮಕಾರಿ ಬೌಲಿಂಗ್ ನಡೆಸುವ ಮೂಲಕ ಚೆನ್ನೈ ಓಟಕ್ಕೆ ತಡೆಯೊಡ್ಡಿದರು.
ಅಂತಿಮವಾಗಿ ಎಂಟು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇನ್ನುಳಿದಂತೆ ಮೊಯಿನ್ ಅಲಿ 34, ರವೀಂದ್ರ ಜಡೇಜ 3, ನಾಯಕ ಮಹೇಂದ್ರ ಸಿಂಗ್ ಧೋನಿ 2, ಡ್ವೇನ್ ಪ್ರೆಟೊರಿಯಸ್ 13 ಹಾಗೂ ಮಹೀಶ್ ತೀಕ್ಷಣ 7* ರನ್ ಗಳಿಸಿದರು.
ಆರ್‌ಸಿಬಿ ಪರ ಹರ್ಷಲ್ ಪಟೇಲ್ ಮೂರು ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಎರಡು ವಿಕೆಟ್ ಕಿತ್ತು ಮಿಂಚಿದರು.
ಸವಾಲಿನ ಮೊತ್ತ ಪೇರಿಸಿದ ಆರ್‌ಸಿಬಿ:
ಈ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ಎಂಟು ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತ್ತು.
ಆರ್‌ಸಿಬಿಗೆ ನಾಯಕ ಪಫ್ ಡುಪ್ಲೆಸಿ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 7.2 ಓವರ್‌ಗಳಲ್ಲಿ 62 ರನ್ ಪೇರಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು.
ಆದರೆ ಉತ್ತಮ ಆರಂಭದ ಸಂಪೂರ್ಣ ಪ್ರಯೋಜನ ಪಡೆಯಲು ಆರ್’ಸಿಬಿ’ಗೆ ಸಾಧ್ಯವಾಗಲಿಲ್ಲ. ಡುಪ್ಲೆಸಿ (38 ರನ್, 22 ಎಸೆತ) ಓಟಕ್ಕೆ ಸ್ಪಿನ್ನರ್ ಮೊಯಿನ್ ಅಲಿ ಬ್ರೇಕ್ ಹಾಕಿದರು.
ಕೊಹ್ಲಿ ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ಗ್ಲೆನ್ ಮ್ಯಾಕ್ಸ್‌ವೆಲ್ (3) ರನೌಟ್ ಆದರು. ಬೆನ್ನಲ್ಲೇ ಕೊಹ್ಲಿ (30 ರನ್, 33 ಎಸೆತ) ಅವರಿಗೂ ಮೊಯಿನ್, ಪೆವಿಲಿಯನ್ ಹಾದಿ ತೋರಿಸಿದರು.
ಪರಿಣಾಮ 79 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡಿತು.
ರಜತ್ ಪಾಟಿದಾರ್ 21 ರನ್‌ಗಳ ಕಾಣಿಕೆ ನೀಡಿದರು.
19ನೇ ಓವರ್‌ನಲ್ಲಿ ಮೂರು ವಿಕೆಟ್ ಗಳಿಸಿದ ಸ್ಪಿನ್ನರ್ ಮಹೀಶ್ ತೀಕ್ಷಣ ಆರ್‌ಸಿಬಿಗೆ ಬಲವಾದ ಪೆಟ್ಟು ನೀಡಿದರು. ಉತ್ತಮವಾಗಿ ಆಡುತ್ತಿದ್ದ ಮಹಿಪಾಲ್ ಲೊಮ್ರರ್ (42 ರನ್, 27 ಎಸೆತ, 3 ಬೌಂಡರಿ, 2 ಸಿಕ್ಸರ್) ಜೊತೆಗೆ ವನಿಂದು ಹಸರಂಗ (0) ಹಾಗೂ ಶಾಬಾಜ್ ಅಹಮದ್ (1) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.
ಅಂತಿಮ ಓವರ್‌ನಲ್ಲಿ ಎರಡು ಸಿಕ್ಸರ್ ಸೇರಿದಂತೆ 16 ರನ್ ಗಳಿಸಿದ ದಿನೇಶ್ ಕಾರ್ತಿಕ್ ಆರ್‌ಸಿಬಿಗೆ ಸವಾಲಿನ ಮೊತ್ತ ಪೇರಿಸಲು ನೆರವಾದರು.
17 ಎಸೆತಗಳನ್ನು ಎದುರಿಸಿದ ಕಾರ್ತಿಕ್ 26 ರನ್ ಗಳಿಸಿ ಔಟಾಗದೆ ಉಳಿದರು. ಚೆನ್ನೈ ಪರ ತೀಕ್ಷಣ ಮೂರು ಹಾಗೂ ಮೊಯಿನ್ ಎರಡು ವಿಕೆಟ್ ಕಿತ್ತು ಮಿಂಚಿದರು.