ಮುಲ್ಕಿ: ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ಮುಲ್ಕಿಯ ರಾಷ್ಟ್ರೀಯ ಹೆದ್ದಾರಿ 66 ಕಾರ್ನಾಡು ಬೈಪಾಸ್ ಬಳಿ ನಡೆದಿದೆ.

ಮೃತಪಟ್ಟ ದುರ್ದೈವಿ ನಿಡ್ಡೋಡಿ ಮುಚ್ಚೂರು ಬಳಿಯ ನಿವಾಸಿ ಮೋಹನ್ ಗೌಡ (50) ಎಂದು ತಿಳಿದು ಬಂದಿದೆ. ಸಹಸವಾರ ಬಾಲಕ ಚರಣರಾಜ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆಂದು ವರದಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಈಕೋ ಕಾರು ಕಾರ್ನಾಡ್ ಬೈಪಾಸ್ ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಏಕಾಏಕಿ ಚಿತ್ರಾಪು ಒಳ ರಸ್ತೆಯಿಂದ ಕಾರ್ನಾಡು ಒಳಪೇಟೆಗೆ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.

ಈ ಸಂದರ್ಭ ಈಕೋ ವಾಹನದ ಚಾಲಕ ಅಪಘಾತ ತಪ್ಪಿಸಲು ಯತ್ನಿಸಿದ್ದರೂ ಫಲಕಾರಿಯಾಗದೆ ಸ್ಕೂಟರ್ ಗೆ ಡಿಕ್ಕಿ ಹೊಡೆದು ಬಳಿಕ ಹೆದ್ದಾರಿ ಬದಿ ನಿಲ್ಲಿಸಿದ ನವಯುಗ ಕಂಪನಿಯ ಹೈವೇ ಪೆಟ್ರೋಲ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಸರಣಿ ಅಪಘಾತ ಸಂಭವಿಸಿದೆ.

ಅಚಾನಕ್ ಆಗಿ ನಡೆದ ಅಪಘಾತದಿಂದ ಭೀಕರ ಸದ್ದು ಉಂಟಾಗಿದ್ದು ಹೈವೇ ಪೆಟ್ರೋಲ್ ಕಾರಿನಲ್ಲಿ ಕುಳಿತಿದ್ದ ನಾಲ್ವರು ಸಿಬ್ಬಂದಿ ಪವಾಡ ಸದೃಶ ಪಾರಾಗಿದ್ದಾರೆ.
ಅಪಘಾತದಿಂದ ಮೃತಪಟ್ಟ ಮೋಹನ್ ಗೌಡ ಚಿತ್ರಾಪು ಶಾಂಭವಿ ನದಿಯಲ್ಲಿ ಮೀನು ಹಿಡಿದು ವಾಪಸು ಸ್ಕೂಟರ್ ನಲ್ಲಿ ತಮ್ಮ ಊರಾದ ನಿಡ್ಡೋಡಿ ಮುಚ್ಚೂರು ಕಡೆಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದಿಂದಾಗಿ ಕೆಲಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದು ಬಂದಿದೆ.