dtvkannada

ಬೆಂಗಳೂರು: ತನ್ನ ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಯುವತಿಯ ಮೇಲೆ ಆ್ಯಸಿಡ್‌ ಎರಚಿ ಪರಾರಿಯಾಗಿದ್ದ ಆರೋಪಿ ನಾಗೇಶ್‌ ಬಾಬುವನ್ನು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಶುಕ್ರವಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರಿಗೆ ಕರೆತರುವ ವೇಳೆ ಮೂತ್ರ ವಿಸರ್ಜನೆಗೆಂದು ಇಳಿದು ಪರಾರಿಯಾಗುವ ವೇಳೆ ತಪ್ಪಿಸಲು ಯತ್ನಿಸಿದಾಗ ಕಾಲಿಗೆ ಗುಂಡಿಟ್ಟು ಬಂಧಿಸಿದ್ದಾರೆಂದು ತಿಳಿದು ಬಂದಿದೆ.

ಏಪ್ರಿಲ್ 28ರಂದು ಕೃತ್ಯ ಎಸಗಿದ್ದ ನಾಗೇಶ್, ತಮಿಳುನಾಡಿಗೆ ಹೋಗಿ ಸ್ವಾಮೀಜಿ ವೇಷ ಧರಿಸಿದ್ದ. ತಿರುವಣ್ಣಾಮಲೈನಲ್ಲಿರುವ ಶಿವ ದೇವಸ್ಥಾನದ ಕೊಠಡಿಯೊಂದರಲ್ಲಿ ಉಳಿದುಕೊಂಡಿದ್ದನೆಂದು ವರದಿಯಾಗಿದೆ.

ನಿತ್ಯವೂ ಧ್ಯಾನ ಹಾಗೂ ಪೂಜೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿ ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರಿಗೂ ಉಪದೇಶ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.

ಆರೋಪಿ ಪತ್ತೆಗೆ ಎಂಟು ತಂಡಗಳನ್ನು ರಚಿಸಲಾಗಿತ್ತು. ಒಂದು ತಂಡ ತಮಿಳುನಾಡಿನ ಎಲ್ಲ ದೇವಸ್ಥಾನಗಳಲ್ಲಿ ಶೋಧ ನಡೆಸುತ್ತಿತ್ತು. ಶಿವ ದೇವಸ್ಥಾನದಲ್ಲಿ ಹೊಸ ಸ್ವಾಮೀಜಿ ಬಂದಿರುವ ಮಾಹಿತಿ ಸ್ಥಳೀಯರಿಂದ ಗೊತ್ತಾಗಿದೆ.

ಪೊಲೀಸರ ತಂಡ, ಭಕ್ತರ ವೇಷದಲ್ಲಿ ದೇವಸ್ಥಾನದೊಳಗೆ ಹೋಗಿದ್ದು ಸ್ವಾಮೀಜಿ ವೇಷದಲ್ಲಿದ್ದ ನಾಗೇಶ್‌ನನ್ನು ನೋಡಿ ಖಚಿತಪಡಿಸಿಕೊಂಡಿದ್ದು ನಂತರ ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ ಎಂದು ತಿಳಿಸಿವೆ.

ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿರುವ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಏ. 28 ಬೆಳಿಗ್ಗೆ ಆರೋಪಿ ಆ್ಯಸಿಡ್ ಎರಚಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಈ ವಾರ್ತೆಗೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿತ್ತು.

ಇದೀಗ ಆರೋಪಿ ಸಿಕ್ಕಿಬಿದ್ದಿದ್ದು ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.

ಏಳು ವರ್ಷದಿಂದ ಸ್ನೇಹ ಹೊಂದಿದ್ದ ಯುವತಿ, ತನ್ನನ್ನು ಪ್ರೀತಿಸಲು ನಿರಾಕರಿಸಿದರು ಎಂಬ ಕಾರಣಕ್ಕೆ ಆ್ಯಸಿಡ್ ಎರಚಿದ್ದನೆಂದು ಹೇಳಿಕೊಂಡಿದ್ದಾನೆಂದು ವರದಿಯಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!