ಉಡುಪಿ: ಕರಾವಳಿ ಜಿಲ್ಲೆಗಳಿಗೆ ಇಂದಿನಿಂದ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮೇ 17, ಮೇ 19 ರಂದು ಆರೆಂಜ್ ಅಲರ್ಟ್ ಮತ್ತು ಮೇ 18ಕ್ಕೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಉಡುಪಿ ಡಿಸಿ ಕೂರ್ಮಾರಾವ್ ಎಂ ಆದೇಶ ಹೊರಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ರಾತ್ರಿಯಿಡೀ ಉಡುಪಿ, ಕಾರ್ಕಳ, ಹೆಬ್ರಿ, ಕುಂದಾಪುರ, ಮಂಗಳೂರು ಭಾಗಗಳಲ್ಲಿ ಜೋರಾಗಿ ಮಳೆ ಸುರಿದಿದೆ. ಮುಂಜಾನೆಯ ವೇಳೆಗೆ ಮಳೆ ಕೊಂಚ ಕಡಿಮೆಯಾಗಿದೆ. ಸದ್ಯ ಮೋಡ ಕವಿದ ವಾತಾವರಣವಿದ್ದು, ಇಂದು ಮಳೆ ಮುಂದುವರಿಯುವ ಸಾಧ್ಯತೆಯಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ. ಜಿಲ್ಲೆಯಾದ್ಯಂತ ನಿನ್ನೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಶಿರಸಿ, ಹೊನ್ನಾವರ, ಭಟ್ಕಳ, ಮುಂಡಗೋಡ ತಾಲೂಕಿನಲ್ಲಿ ನಿನ್ನೆ ರಾತ್ರಿ ಭಾರೀ ಮಳೆ ಸುರಿದಿದೆ. ಇಲ್ಲೂ ಕೂಡಾ ಮುಂಜಾನೆ ವೇಳೆಗೆ ಮಳೆ ಕೊಂಚ ಕಡಿಮೆಯಾಗಿದೆ.
ನಾಲ್ಕು ಕಾರಣಗಳಿಂದ ಮಳೆ:
ಪ್ರಮುಖವಾಗಿ ನಾಲ್ಕು ಕಾರಣಗಳಿಂದ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮೊದಲನೆಯದಾಗಿ ಲಕ್ಷ ದ್ವೀಪದಲ್ಲಿ 3.6 ಕಿಮೀ ನಿಂದ 5.8 ಕಿಮೀ ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಬೀಸುತ್ತಿದೆ. ಎರಡನೇದಾಗಿ ತಮಿಳುನಾಡು ಕರಾವಳಿಯಲ್ಲಿ 1.5ರಿಂದ 3.1 ಕಿಮೀ ಎತ್ತರದಲ್ಲಿ ಮತ್ತೊಂದು ಸುಳಿಗಾಳಿ ಬೀಸುತ್ತಿದೆ. ಮೂರನೆಯದಾಗಿ ತೇವಾಂಶ ತುಂಬಿದ ನೈರುತ್ಯ ಮಾನ್ಸೂನ್ ಗಾಳಿಯು ಅರಬ್ಬೀ ಸಮುದ್ರದಿಂದ ಪಶ್ಚಿಮ ಕರಾವಳಿಗೆ ಸಮುದ್ರಮಟ್ಟದಿಂದ 1.5 ಕಿಮೀ ಎತ್ತರದ ವರೆಗೆ ಅತಿ ವೇಗವಾಗಿ ಬೀಸುತ್ತಿದೆ. ಕೊನೆಯದಾಗಿ ಮಧ್ಯಪ್ರವೇಶದಿಂದ ತಮಿಳುನಾಡುವರೆಗೆ 900 ಮೀ. ಎತ್ತರದಲ್ಲಿ ಟ್ರಪ್ ಕರ್ನಾಟಕವನ್ನು ಹಾದು ಹೋಗಲಿದೆ. ಈ ಕಾರಣಗಳಿಂದ ಮಳೆಯಾಗುತ್ತಿದೆ.
5 ದಿನ ಬಿಡುವು: ಸದ್ಯದ ಮಟ್ಟಿಗೆ ಮೇ 21ರ ವರೆಗೆ ಭಾರೀ ಮಳೆಯ ಮುನ್ಸೂಚನೆ ಇದೆ. ನಂತರ 5 ದಿನಗಳ ಕಾಲ ಬಿಡುವು ನೀಡಲಿದ್ದು, ಮತ್ತೆ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆಗಳಿವೆ.
ಲಕ್ಷದ್ವೀಪದಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ಮೇಲೆ 21ರ ಬಳಿಕ ಮಳೆಯ ಸಾಧ್ಯತೆಗಳನ್ನು ನಿರ್ಣಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ.