dtvkannada

ಮುಂಬೈ: ಶನಿವಾರದ ಅತ್ಯಂತ ಮಹತ್ವದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಸೋತುಹೋಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಮುಂಬೈ 5 ವಿಕೆಟ್‌ಗಳ ಗೆಲುವಿನೊಂದಿಗೆ ಕೂಟಕ್ಕೆ ವಿದಾಯ ಘೋಷಿಸಿದರೆ, ಇತ್ತ ಈ ಸೋಲಿನೊಂದಿಗೆ ಡೆಲ್ಲಿ ಪ್ಲೇ ಆಫ್ ಕನಸು ನುಚ್ಚುನೂರಾಗಿದೆ.

ಇದರ ಪರಿಣಾಮ ಫಾಪ್ ಡು ಪ್ಲೆಸಿಸ್‌ ನೇತೃತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪ್ಲೇಆಫ್ ಗೇರಿದೆ. ಶನಿವಾರ ಗೆದ್ದ ಮುಂಬೈ ಇಂಡಿಯನ್ಸ್‌ ತಾನಂತೂ ಮೊದಲೇ ಪ್ಲೇಆಫ್ ನಿಂದ ಹೊರಬಿದ್ದಿತ್ತು. ಅದರೊಂದಿಗೆ ಡೆಲ್ಲಿಯನ್ನೂ ಹೊರದಬ್ಬಿತು.

160 ರನ್‍ಗಳ ಗುರಿ ಪಡೆದ ಮುಂಬೈ ಗೆಲುವಿಗಾಗಿ ತಿಲಕ್ ವರ್ಮಾ ಮತ್ತು ಟಿಮ್ ಡೇವಿಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ವೇಳೆ ಸ್ಫೋಟಕ ಆಟವಾಡುತ್ತಿದ್ದ ಟಿಮ್ ಡೇವಿಡ್ 34 ರನ್ (15 ಎಸೆತ, 2 ಬೌಂಡರಿ, 4 ಸಿಕ್ಸ್) ವಿಕೆಟ್ ಕಳೆದುಕೊಂಡಿತು. ಈ ಮೊದಲು ಡೇವಿಡ್‌ ಅವರ ಸ್ಫೋಟಕ ಆಟ ಮುಂಬೈ ಗೆಲುವನ್ನು ಮತ್ತಷ್ಟು ಸನಿಹಕ್ಕೆ ತಂದು ನಿಲ್ಲಿಸಿತ್ತು. ಅಂತಿಮವಾಗಿ 19.1 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 160 ರನ್‌ ಸಿಡಿಸಿ ಮುಂಬೈ ಗೆಲುವಿನ ನಗೆ ಬೀರಿತು. ಈ ಗೆಲುವು ಆರ್‌ಸಿಬಿ ಪ್ಲೇ ಆಫ್‍ಗೇರಲು ನೆರವಾಯಿತು. ಇತ್ತ ಮಹತ್ವದ ಪಂದ್ಯ ಸೋತ ಡೆಲ್ಲಿ ತಂಡದ ಈವರೆಗಿನ ಹೋರಾಟ ವ್ಯರ್ಥವಾಯಿತು.

View this post on Instagram

A post shared by IPL (@iplt20)

ಮೊದಲು ಬ್ಯಾಟಿಂಗ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 7 ವಿಕೆಟಿಗೆ 159 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು. ಇದನ್ನು ಬೆನ್ನತ್ತಿದ ಮುಂಬೈ 19.1 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿತು. ಮುಂಬೈ ಪರ ಇಶಾನ್‌ ಕಿಶನ್‌ (48), ಡೆವಾಲ್ಡ್‌ ಬ್ರೆವಿಸ್‌ (37), ಟಿಮ್‌ ಡೇವಿಡ್‌ (34) ಅತ್ಯುತ್ತಮ ಬ್ಯಾಟಿಂಗ್‌ ಮಾಡಿದರು. ಡೆಲ್ಲಿಯ ಅನ್ರಿಚ್‌ ನೋರ್ಜೆ, ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್‌ ಪಡೆದರು.

ತೀವ್ರ ಕುತೂಹಲ ಮೂಡಿಸಿದ ಪಂದ್ಯದ ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಆದರೆ ಈ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾದ ಡೆಲ್ಲಿ ತಂಡದ ಆರಂಭಿಕರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

ಡೇವಿಡ್ ವಾರ್ನರ್ 5 ರನ್‍ಗೆ ಸುಸ್ತಾದರೆ, ಮಿಚೆಲ್ ಮಾರ್ಷ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಇತ್ತ ಉತ್ತಮ ಹೊಡೆತಗಳ ಮೂಲಕ ಭರವಸೆ ಮೂಡಿಸಿದ ಪೃಥ್ವಿ ಶಾ 24 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು.

ಪಂತ್, ಪೊವೆಲ್ ಜೊತೆಯಾಟ
50 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ನಾಯಕ ರಿಷಭ್ ಪಂತ್ ಮತ್ತು ರೋವ್ಮನ್ ಪೊವೆಲ್ ಚೇತರಿಕೆ ನೀಡಲು ಮುಂದಾದರು. ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಬೌಂಡರಿ, ಸಿಕ್ಸ್ ಸಿಡಿಸುತ್ತ ಮೊತ್ತ ಹೆಚ್ಚಿಸಿದ ಈ ಜೋಡಿ 5ನೇ ವಿಕೆಟ್‍ಗೆ 75 ರನ್ (44 ಎಸೆತ) ಜೊತೆಯಾಟವಾಡಿತು. ಈ ವೇಳೆ ಪಂತ್ 39 ರನ್ (33 ಎಸೆತ, 4 ಬೌಂಡರಿ, 1 ಸಿಕ್ಸ್) ಚಚ್ಚಿ ಔಟ್ ಆದರು. ಆ ಬಳಿಕ ಪೊವೆಲ್ 43 ರನ್ (34 ಎಸೆತ, 1 ಬೌಂಡರಿ, 4 ಸಿಕ್ಸ್) ಸಿಡಿಸಿ ಮುನ್ನುಗ್ಗುತ್ತಿದ್ದ ವೇಳೆ ಬುಮ್ರಾ ಎಸೆದ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು.

ಕೊನೆಯಲ್ಲಿ ಅಕ್ಷರ್ ಪಟೇಲ್ ಬಿರುಸಿನ ಅಜೇಯ 19 ರನ್ (10 ಎಸೆತ, 2 ಸಿಕ್ಸ್) ನೆರವಿನಿಂದ ತಂಡದ ಮೊತ್ತ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159ಕ್ಕೆ ಏರಿತು.

ಸಾಧಾರಣ ಮೊತ್ತ ಬೆನ್ನಟ್ಟಿದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಬಂದಷ್ಟೇ ವೇಗವಾಗಿ 2 ರನ್ ಗಳಿಸಿ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು. ಆ ಬಳಿಕ ಒಂದಾದ ಇಶಾನ್ ಕಿಶನ್ ಮತ್ತು ಡೆವಾಲ್ಡ್ ಬ್ರೆವಿಸ್ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಬ್ರೆವಿಸ್ 37 ರನ್ (33 ಎಸೆತ, 1 ಬೌಂಡರಿ, 3 ಸಿಕ್ಸ್) ಮತ್ತು ಕಿಶನ್ 48 ರನ್ (35 ಎಸೆತ, 3 ಬೌಂಡರಿ, 4 ಸಿಕ್ಸ್) ಔಟ್ ಆಗುವ ಮುನ್ನ 2ನೇ ವಿಕೆಟ್‍ಗೆ 51 ರನ್ (37 ಎಸೆತ) ಜೊತೆಯಾಟವಾಡಿದರು.

ಮುಂಬೈ ಪರ ಬೌಲಿಂಗ್‍ನಲ್ಲಿ ಮಿಂಚಿದ ಬುಮ್ರಾ 3 ವಿಕೆಟ್ ಕಿತ್ತು ಡೆಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಉಳಿದಂತೆ ರಮಣದೀಪ್ ಸಿಂಗ್ 2, ಡೇನಿಯಲ್ ಸ್ಯಾಮ್ ಮತ್ತು ಮಯಾಂಕ್ ಮಾರ್ಕಂಡೆ ತಲಾ 1 ವಿಕೆಟ್ ಪಡೆದರು.

By dtv

Leave a Reply

Your email address will not be published. Required fields are marked *

error: Content is protected !!