ಮಂಗಳೂರು: ಮಳಲಿ ಮಸೀದಿಯಲ್ಲಿ ದೇವಸ್ಥಾನ ಹೋಲುವ ರಚನೆ ಪತ್ತೆಯಾದ ಹಿನ್ನೆಲೆಯಲ್ಲಿ ಬುಧವಾರ ಕೇರಳದ ಪ್ರಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ್ ಅವರ ತಾಂಬೂಲ ಪ್ರಶ್ನೆಯಲ್ಲಿ ಗುರುಸಾನಿಧ್ಯ ಗೋಚರವಾಗಿದೆ ಎಂದು ಜ್ಯೊತಿಷಿ ಹೇಳಿದ್ದಾರೆ.
ಮೊದಲಾಗಿ ಕುಂಭ ರಾಶಿಯಲ್ಲಿ ತಾಂಬೂಲ ಪ್ರಶ್ನಾ ಚಿಂತನೆಯನ್ನು ಇರಿಸಲಾಗಿದೆ. ಆ ಬಳಿಕ ಪ್ರಶ್ನಾ ಚಿಂತನೆಯಲ್ಲಿ ಅಲ್ಲಿ ಹಿಂದೆ ಗುರುಮಠವಿತ್ತು ಎಂದು ಗೋಚರವಾಗಿದೆ. ಅಲ್ಲಿ ಶಿವನ ಆರಾಧನೆ ಆಗಿರಬಹುದೆಂದು ತಿಳಿದು ಹಿಂದಿನ ಕಾಲದ ವ್ಯಾಜ್ಯವೊಂದರ ಪರಿಣಾಮ ಇಲ್ಲಿ ಹಿಂದೆ ಇದ್ದ ದೈವ ಸಾನಿಧ್ಯವು ನಾಶವಾಗಿದೆ. ಹಾಗಾಗಿ ಹಿಂದೆ ಇದ್ದವರು ಅಲ್ಲಿಂದ ಸ್ಥಳಾಂತರಗೊಂಡಿದ್ದಾರೆ. ಆದರೆ ದೈವ ಸಾನಿಧ್ಯವು ಅಲ್ಲಿಂದ ಪೂರ್ತಿಯಾಗಿ ಹೋಗಿಲ್ಲ. ಆದರೆ ಯಾವ ಸ್ಥಳದಲ್ಲಿ ದೈವ ಸಾನಿಧ್ಯವಿದೆ ಎಂದು ಶೋಧಿಸಬೇಕು. ಆ ಸಾನಿಧ್ಯದಲ್ಲಿ ಜೀವ ಕಳೆಯಿದೆ. ಆದ್ದರಿಂದ ಹೇಗಾದರೂ ಅದು ಪತ್ತೆಯಾಗುತ್ತದೆ ಎಂದು ಹೇಳಿದ್ದಾರೆ.
ಶೈವ – ವೈಷ್ಣವ ವಿವಾದದಲ್ಲಿ ಇಲ್ಲಿನ ಹಿಂದಿನ ದೈವ ಸಾನಿಧ್ಯ ನಾಶವಾಗಿದೆ. ಈ ಸಂದರ್ಭ ಮರಣವೊಂದು ಘಟಿಸಿದೆ. ಆ ಬಳಿಕ ಹಿಂದೆ ಅಲ್ಲಿದ್ದವರು ಈ ದೈವ ಸಾನಿಧ್ಯವನ್ನು ಬೇರೆಲ್ಲಿಯೋ ಆರಾಧನೆ ಮಾಡುತ್ತಿದ್ದಾರೆ. ಅದರ ಫಲವಾಗಿ ಈಗಲೂ ಈ ಮಸೀದಿಯ ಸ್ಥಳದಲ್ಲಿರುವ ದೈವಸಾನಿಧ್ಯಕ್ಕೆ ಚೈತನ್ಯ ಶಕ್ತಿ ಇದೆ. ಆದ್ದರಿಂದ ಈಗ ಅದು ಗೋಚರವಾಗಿದೆ ಎಂದರು.
ಎಲ್ಲರೂ ಒಗ್ಗಟ್ಟಾಗಿ ಸಮ್ಮತದಿಂದ ಈ ವಿವಾದವನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಊರಿಗೆ ಗಂಡಾಂತರವಿದೆ. ಈ ದೈವ ಸಾನಿಧ್ಯ ಅಭಿವೃದ್ಧಿ ಆದಲ್ಲಿ ಈಗ ಅಲ್ಲಿ ಇದ್ದವರಿಗೂ ಉತ್ತಮವೇ. ಆದ್ದರಿಂದ ಎಲ್ಲರೂ ಒಟ್ಟಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದು ದೈವಜ್ಞರು ಹೇಳಿದ್ದಾರೆ.