dtvkannada

ಕೋಲ್ಕತ್ತ: ರಜತ್ ಪಾಟಿದಾರ್ (112*) ಸ್ಫೋಟಕ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2022 ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆಯುತ್ತಿರುವ ಪ್ಲೇ-ಆಫ್ ಹಂತದ ಎಲಿಮಿನೇಟರ್ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 207 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.

ದಿನೇಶ್ ಕಾರ್ತಿಕ್ ಕೂಡ (37*) ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. 

ನಾಯಕ ಫಫ್ ಡುಪ್ಲೆಸಿ, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್‌ಗಳನ್ನು ಕಳೆದುಕೊಂಡ ಆರ್‌ಸಿಬಿ ಸಂಕಷ್ಟಕ್ಕೆ ಒಳಗಾಗಿತ್ತು. ಆದರೆ ವಿಕೆಟ್‌ನ ಇನ್ನೊಂದು ತುದಿಯಿಂದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಪಾಟಿದಾರ್ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಪಾಟಿದಾರ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಫಿಫ್ಟಿ ಬಳಿಕವೂ ಅಬ್ಬರಿಸಿದ ಪಾಟಿದಾರ್ 49 ಎಸೆತಗಳಲ್ಲಿ ಚೊಚ್ಚಲ ಶತಕ ಪೂರ್ಣಗೊಳಿಸಿದರು. 
ಇದೇ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಪಾಟಿದಾರ್ ಚೊಚ್ಚಲ ಅರ್ಧಶತಕ ಸಾಧನೆ ಮಾಡಿದ್ದರು. ಈಗ ತಮ್ಮದೇ ವೈಯಕ್ತಿಕ ಗರಿಷ್ಠ ಮೊತ್ತವನ್ನು ಉತ್ತಮಪಡಿಸಿದ್ದಾರೆ. 

ಅತಿ ಒತ್ತಡದ ಪಂದ್ಯದಲ್ಲಿ ಲಖನೌ ಬೌಲರ್‌ಗಳನ್ನು ನಿರ್ದಯವಾಗಿ ಎದುರಿಸಿದ ಪಾಟಿದಾರ್, ಪ್ಲೇ-ಆಫ್ ಪಂದ್ಯದಲ್ಲಿ ಶತಕ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾದರು.  

ಮಳೆಯಿಂದಾಗಿ 40 ನಿಮಿಷ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಬೆಂಗಳೂರು ತಂಡದ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಓವರ್‌ನಲ್ಲಿ ನಾಯಕ ಫಫ್ ಡುಪ್ಲೆಸಿ (0) ವಿಕೆಟ್ ನಷ್ಟವಾಯಿತು. ಮೊಹಸಿನ್ ಖಾನ್ ದಾಳಿಯಲ್ಲಿ ಖಾತೆ ತೆರೆಯಲಾಗದೇ ಡುಪ್ಲೆಸಿ ಪೆವಿಲಿಯನ್‌ಗೆ ಮರಳಿದರು. 

ಬಳಿಕ ಜೊತೆ ಸೇರಿದ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ ತಂಡವನ್ನು ಮುನ್ನಡೆಸಿದರು. ವಿರಾಟ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ಪಾಟಿದಾರ್ ಆಕ್ರಮಣಕಾರಿ ಆಟವಾಡಿದರು. 

ಕೃಣಾಲ್ ಪಾಂಡ್ಯ ಅವರ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 20 ರನ್ ಸಿಡಿಸಿದರು. ಈ ಮೂಲಕ ಪವರ್ ಪ್ಲೇನಲ್ಲಿ ಆರ್‌ಸಿಬಿ ಒಂದು ವಿಕೆಟ್ ನಷ್ಟಕ್ಕೆ 52 ರನ್ ಪೇರಿಸಿತು. 

ಪಾಟಿದಾರ್ ಹಾಗೂ ಕೊಹ್ಲಿ ದ್ವಿತೀಯ ವಿಕೆಟ್‌ಗೆ 66 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 24 ಎಸೆತಗಳನ್ನು ಎದುರಿಸಿದ ಕೊಹ್ಲಿ ಎರಡು ಬೌಂಡರಿಗಳ ನೆರವಿನಿಂದ 25 ರನ್ ಗಳಿಸಿದರು. 

ಅತ್ತ ಬಿರುಸಿನ ಆಟವಾಡಿದ ಪಾಟಿದಾರ್ 28 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ 9 ರನ್ ಗಳಿಸಿ ಔಟ್ ಆದರು. 

ಮಹಿಪಾಲ್ ಲೊಮ್ರೊರ್ (14) ಸಹ ಬೇಗನೇ ನಿರ್ಗಮಿಸಿದರು. ನಿರ್ಣಾಯಕ ಹಂತದಲ್ಲಿ ದಿನೇಕ್ ಕಾರ್ತಿಕ್ ಹಾಗೂ ಪಾಟಿದಾರ್ ಜೀವದಾನ ಪಡೆದಿರುವುದು ಆರ್‌ಸಿಬಿ ಪಾಲಿಗೆ ವರದಾನವಾಗಿ ಪರಿಣಮಿಸಿತು. 

ಪಾಟಿದಾರ್ ಹಾಗೂ ಕಾರ್ತಿಕ್ ಮುರಿಯದ ಐದನೇ ವಿಕೆಟ್‌ಗೆ 41 ಎಸೆತಗಳಲ್ಲಿ 92 ರನ್‌ಗಳ ಜೊತೆಯಾಟ ಕಟ್ಟಿದರು. ಈ ಮೂಲಕ ಆರ್‌ಸಿಬಿ 207 ರನ್‌ಗಳ ಬೃಹತ್ ಮೊತ್ತ ಪೇರಿಸಿತು. 

By dtv

Leave a Reply

Your email address will not be published. Required fields are marked *

error: Content is protected !!