‘ಗಣರಾಜ್ಯ ರಕ್ಷಿಸಿ’ ಘೋಷಣೆಯಡಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಮಾವೇಶದ ವರ್ಚಸ್ಸನ್ನು ಕೆಡಿಸುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ. ಲಕ್ಷಾಂತರ ಮಂದಿಯನ್ನು ಆಕರ್ಷಿತಗೊಳಿಸಿದ ಈ ಸಮಾವೇಶ ಮತ್ತು ರ್ಯಾಲಿಯಲ್ಲಿ ಆರೆಸ್ಸೆಸ್ ಮತ್ತು ಸಂಘಪರಿವಾರದ ಭಯೋತ್ಪಾದನೆ ವಿರುದ್ಧ ಘೋಷಣೆ ಕೂಗಲಾಯಿತು. ಈ ರೀತಿಯ ಫ್ಯಾಶಿಸ್ಟ್ ವಿರೋಧಿ ಘೋಷಣೆಗಳು ಸಂಘಟನೆಯ ನಿಲುವಾಗಿದೆ. ಈ ಮಧ್ಯೆ, ಅಲಪ್ಪುಝ ರ್ಯಾಲಿಯಲ್ಲಿ ಪಾಲ್ಗೊಂಡ ಓರ್ವ ಬಾಲಕ ಕೂಗಿದ ಘೋಷಣೆಯನ್ನು ವಿರೋಧಿಸುವ ನೆಪದಲ್ಲಿ ಸಂಘಟನೆಯನ್ನು ಗುರಿಪಡಿಸುವ ಸಂಘಟಿತ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಅಪಪ್ರಚಾರದಲ್ಲಿ ಮಾಧ್ಯಮದ ಕೆಲವು ವರ್ಗಗಳೂ ಭಾಗಿಯಾಗಿವೆ ಎಂದು ಪಿ.ಎಫ್.ಐ ನಾಯಕರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ರ್ಯಾಲಿಯ ನಡುವೆ ಕೂಗಲಾದ ಘೋಷಣೆಗಳು ಪಾಪ್ಯುಲರ್ ಫ್ರಂಟ್ ನಿಂದ ನೀಡಲಾದ ಅಧಿಕೃತ ಘೋಷಣೆಗಳಲ್ಲ ಎಂಬುದನ್ನು ಸಂಘಟನೆಯು ಈ ಮೊದಲೇ ಸ್ಪಷ್ಟಪಡಿಸಿದೆ. ಆರೆಸ್ಸೆಸ್ ಮತ್ತು ಉಗ್ರವಾದಿ ಸಂಘಟನೆಗಳು ಈ ವಿಚಾರವನ್ನು ಧರ್ಮಗಳೊಂದಿಗೆ ಜೋಡಿಸಿ ಸುಳ್ಳು ಪ್ರಚಾರವನ್ನು ಹರಡುತ್ತಿವೆ. ರ್ಯಾಲಿಯಲ್ಲಿ ಹಿಂದುಗಳು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಯಾವುದೇ ಘೋಷಣೆಗಳನ್ನು ಕೂಗಿಲ್ಲ ಮತ್ತು ಯಾವುದೇ ಸಮುದಾಯದ ವಿರುದ್ಧ ದ್ವೇಷ ಹರಡುವುದು ಪಾಪ್ಯುಲರ್ ಫ್ರಂಟ್ ನ ನೀತಿಯಲ್ಲ. ಬಾಲಕನು ಕೂಗಿದ ಘೋಷಣೆಗಳು ಆರೆಸ್ಸೆಸ್ ಮತ್ತು ಆಡಳಿತದ ದಬ್ಬಾಳಿಕೆಯ ವಿರುದ್ಧವಾಗಿತ್ತು. ಬಾಲಕನು ಘೋಷಣೆ ಕೂಗಿದ ವಿಡಿಯೋವನ್ನು ನೋಡಿದ ಯಾರಿಗಾದರೂ ಇದು ಅರ್ಥವಾಗುತ್ತದೆ. ಆರೆಸ್ಸೆಸ್ ಮುಖವಾಣಿ ಜನಂ ಟಿವಿ ವಿರೂಪಗೊಳಿಸಿದ ವಿಡಿಯೋದ ಸಂಗ್ರಹಿತ ಆವೃತ್ತಿಯನ್ನೇ ಕೆಲವು ಮಾಧ್ಯಮಗಳು ಪ್ರಸಾರ ಮಾಡಿದ್ದು ವಿಪರ್ಯಾಸ. ಅಲಪ್ಪುಝದಲ್ಲಿ ಆಯೋಜಿಸಿದ್ದ ಸಮಾವೇಶ ಮತ್ತು ರ್ಯಾಲಿಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಬೆರಳೆಣಿಕೆಯ ಮಾಧ್ಯಮಗಳನ್ನು ಹೊರತುಪಡಿಸಿದರೆ, ಮುಖ್ಯವಾಹಿನಿ ಟಿವಿ ಚಾನೆಲ್ ಗಳು ಈ ಕಾರ್ಯಕ್ರಮದ ಸುದ್ದಿ ಪ್ರಸಾರವನ್ನು ನಿಷೇಧಿಸಿದವು.
ಸಂಘಪರಿವಾರ ನಡೆಸುತ್ತಿರುವ ಅಪಪ್ರಚಾರದ ಹೆಸರಿನಲ್ಲಿ ಮುಸ್ಲಿಮ್ ಸಮುದಾಯ ಮತ್ತು ಸಂಘಟನೆಯನ್ನು ಗುರಿಪಡಿಸಲು ನಾವು ಅವಕಾಶ ನೀಡಲಾರೆವು. ಇಸ್ಲಾಮೋಫೋಬಿಯಾ ಹರಡುವ ವ್ಯವಸ್ಥಿತ ತಂತ್ರಗಳನ್ನು ಖಂಡಿತಾ ಪ್ರತಿರೋಧಿಸಲಾಗುವುದು. ದ್ವೇಷಪೂರಿತ ಅಪಪ್ರಚಾರಕ್ಕೆ ಸಂಬಂಧಿಸಿ ಪೊಲೀಸರು ಕುರುಡಾಗಿದ್ದಾರೆ ಮತ್ತು ಅವರು ಸಮಾವೇಶ ಆಯೋಜಕರ ವಿರುದ್ಧ ಮಾಡದ ಅಪರಾಧಕ್ಕಾಗಿ ಪ್ರಕರಣ ದಾಖಲಿಸಿಕೊಂಡು ಕೋಮು ಪ್ರಚಾರ ನಡೆಸುವವರನ್ನು ಮುಕ್ತವಾಗಿ ಬಿಟ್ಟಿದ್ದಾರೆ. ಈ ಪ್ರಕರಣವು ಕೇರಳ ಗೃಹ ಇಲಾಖೆಯಿಂದ ನಡೆಸಲಾಗುತ್ತಿರುವ ಹಿಂದುತ್ವ ತುಷ್ಟೀಕರಣದ ಭಾಗವಾಗಿದೆ. ಪಾಪ್ಯುಲರ್ ಫ್ರಂಟ್ ಮೇಲೆ ಇಂತಹ ಕಲ್ಪಿತ ಮೊಕದ್ದಮೆಗಳನ್ನು ಹೇರುವ ಮೂಲಕ ಸಂಘಟನೆಯು ತನ್ನ ಹೆಗಲಿಗೇರಿಸಿಕೊಂಡಿರುವ ಕಾರ್ಯಗಳನ್ನು ತಡೆಯಲಾಗದು. ಕಾನೂನು ಮತ್ತು ನ್ಯಾಯವು ಎಲ್ಲರಿಗೂ ಸಮಾನವಾಗಿರಬೇಕು.
‘ಅನಂತಪುರಿ ಹಿಂದು ಮಹಾ ಸಮ್ಮೇಳನ’ದಲ್ಲಿ ಮುಸ್ಲಿಮ್ ವ್ಯಾಪಾರಸ್ಥರನ್ನು ಬಹಿಷ್ಕರಿಸುವಂತೆ ಬಹಿರಂಗವಾಗಿ ಕರೆ ನೀಡಿದಾಗ, ಅದು ಸಾರ್ವಜನಿಕರ ಆತ್ಮಸಾಕ್ಷಿಯನ್ನು ಬಾಧಿಸಲಿಲ್ಲ. ಮುಸ್ಲಿಮರು ಮುಸ್ಲಿಮೇತರರಿಗೆ ಕ್ಯಾಸ್ಟ್ರೇಶನ್ ಔಷಧಿಗಳನ್ನು ಹಾಕಿ ಚಹಾ ನೀಡುತ್ತಾರೆ ಮತ್ತು ಅವರ ಪುರುಷತ್ವವನ್ನು ಹರಣ ಮಾಡುತ್ತಾರೆ ಎಂದು ಇದೇ ಕಾರ್ಯಕ್ರಮದಲ್ಲಿಅಪಪ್ರಚಾರ ನಡೆಸಲಾಯಿತು.
ಹಿಂದು ಸಮ್ಮೇಳನದ ಹೆಸರಿನಲ್ಲಿ ನಿರಂತರ ನಾಲ್ಕು ದಿನಗಳ ವರೆಗೆ ಕೋಮು ವಿಷವನ್ನು ಕಕ್ಕಿದಾಗ ಆಘಾತಕ್ಕೆ ಒಳಗಾಗದ ಜನರು, ಆರೆಸ್ಸೆಸ್ ವಿರುದ್ಧ ಘೋಷಣೆ ಕೂಗಿರುವುದನ್ನು ನೋಡಿ ಈಗ ಗಾಬರಿಯಾಗಿದ್ದಾರೆ. ಅವರೆಲ್ಲರೂ ಹಿಂದು-ಜಾತ್ಯತೀತ ಆತ್ಮಸಾಕ್ಷಿಯನ್ನು ಹೊಂದಿರುವುದನ್ನು ಇದು ಸಾಬೀತುಪಡಿಸುತ್ತದೆ. ಆರೆಸ್ಸೆಸ್ ವಿರೋಧಿ ಘೋಷಣೆಗಳನ್ನು ಕೆಲವು ಧರ್ಮಗಳ ವಿರುದ್ಧದ ಘೋಷಣೆಗಳಾಗಿ ಬಿಂಬಿಸುತ್ತಿರುವುದು ಅಪಾಯಕಾರಿಯಾಗಿದೆ. ಇದು ಕೇರಳದ ಸಾಮಾಜಿಕ ವಾತಾವರಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಿ.ಪಿ.ಮುಹಮ್ಮದ್ ಬಶೀರ್ (ರಾಜ್ಯಾಧ್ಯಕ್ಷರು, ಪಾಪ್ಯುಲರ್ ಫ್ರಂಟ್ ಕೇರಳ)
ಸಿ.ಎ.ರವೂಫ್, (ರಾಜ್ಯ ಕಾರ್ಯದರ್ಶಿ, ಪಾಪ್ಯುಲರ್ ಫ್ರಂಟ್ ಕೇರಳ) ಉಪಸ್ಥಿತರಿದ್ದರು.