ಕುಂದಾಪುರ: ಪ್ರೀತಿ ಪ್ರೇಮದ ಹೆಸರಿನಲ್ಲಿ ಯುವತಿಯೊಬ್ಬಳನ್ನು ಅನ್ಯಧರ್ಮದ ವಿವಾಹಿತ ಯುವಕನೊಬ್ಬ ಕಾಮದಾಟಕ್ಕೆ ಬಳಸಿ, ಮಾನಸಿಕ ಕಿರುಕುಳ ನೀಡಿದ್ದು, ಕಿರುಕುಳ ತಾಳಲಾರದೇ 3 ದಿನಗಳ ಹಿಂದೆ ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಕುಂದಾಪುರದ ಕೋಟೇಶ್ವರದಲ್ಲಿ ನಡೆದಿದೆ.
ತಾಲೂಕಿನ ಉಪ್ಪಿನಕುದ್ರು ಮೂಲದ ಶಿಲ್ಪಾ ದೇವಾಡಿಗ ಮೃತ (25) ಯುವತಿ. ಆರೋಪಿಯನ್ನು ಅಝೀಝ್ (35) ಎಂದು ಗುರುತಿಸಲಾಗಿದೆ.
ವಿವಾಹಿತನಾಗಿದ್ದ ಅಝೀಝ್ ಹಾಗೂ ಕುಂದಾಪುರದ ತಲ್ಲೂರಿನ ಜವಳಿ ಅಂಗಡಿಯಲ್ಲಿ ಉದ್ಯೋಗಕ್ಕಿದ್ದ ಶಿಲ್ಪಾ ನಡುವೆ 4 ವರ್ಷಗಳ ಹಿಂದೆ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಅಕ್ರಮ ಸಂಬಂಧಕ್ಕೆ ಕಾರಣವಾಗಿತ್ತು. ಯುವಕನ ಬಣ್ಣ ಬಣ್ಣದ ಮಾತಿಗೆ ಮರುಳಾದ ಶಿಲ್ಪಾ ಅವನ ಫ್ಲ್ಯಾಟ್‌ನಲ್ಲಿ ಬೆತ್ತಲಾಗಿದ್ದಳು. ಇದನ್ನೇ ನೆಪವಾಗಿಸಿಕೊಂಡಿದ್ದ ಅಝೀಝ್ ಆಕೆಯ ಪೋಟೋಗಳನ್ನು ತೆಗೆದಿರಿಸಿದ್ದ.
ಇದಾದ ನಂತರ ಅದೇ ಪೋಟೋಗಳನ್ನು ಬಳಸಿ ಆಕೆಯನ್ನು ಮಂಚಕ್ಕೆ ಕರೆಯುತ್ತಿದ್ದ, ಮುಂದೆ ತನ್ನನ್ನೇ ಮದುವೆಯಾಗುವಂತೆ ಒತ್ತಾಯಿಸಿದ್ದ. ಇದಕ್ಕೊಪ್ಪದಿದ್ದಾಗ ನಿನ್ನ ಪೋಟೋ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದ. ಇದರಿಂದ ರೋಸಿ ಹೋದ ಯುವತಿ ನಾಲ್ಕು ದಿನಗಳ ಹಿಂದೆ ಇಲಿಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ತಕ್ಷಣ ಆಸ್ಪತ್ರೆ ದಾಖಲಿಸಿದ್ದರೂ ಆಕೆ ಇಂದು ಚಿಕಿತ್ಸೆ ಫಲಿಸದೇ ಜೀವಬಿಟ್ಟಿದ್ದಾಳೆ.
ಶಿಲ್ಪಾ ಸಾವನ್ನಪ್ಪಿದ ಮಾಹಿತಿ ದೊರೆಯುತ್ತಿದ್ದಂತೆ ಅಝೀಝ್ ಎಸ್ಕೇಪ್ ಆಗಿದ್ದಾನೆ. ಸದ್ಯ ಪ್ರಕರಣ ಕೈಗೆತ್ತಿಕೊಂಡಿರುವ ಕುಂದಾಪುರ ಪೊಲೀಸರು ಆರೋಪಿಯ ಬೆನ್ನತ್ತಿದ್ದಾರೆ.
ಘಟನೆ ಸಂಬಂಧ ಮಾತನಾಡಿರುವ ಶಿಲ್ಪಾ ಸಹೋದರ ರಾಘವೇಂದ್ರ, ನನ್ನ ತಂಗಿಯನ್ನು ಅಝೀಝ್ ದುರುಪಯೋಗಪಡಿಸಿಕೊಂಡಿದ್ದಾನೆ. ಟಾರ್ಚರ್ ಕೊಟ್ಟು ಮತಾಂತರವಾಗಲು ಒತ್ತಾಯಿಸಿರಬೇಕು. ಆಕೆ ಆಸ್ಪತ್ರೆಯಲ್ಲಿ ಕಿರುಕುಳ ಕೊಟ್ಟ ವಿಚಾರ ಹೇಳಿದ್ದಾಳೆ.
ಮದುವೆಯಾಗುವುದಾಗಿ ನಂಬಿಸಿ ಫೋಟೋ ವಿಡಿಯೋ ಮಾಡಿದ್ದಾಗಿ ಹೇಳಿದ್ದಾಳೆ. ಅವರಿಗೆ ಹೇಗೆ ಸಂಪರ್ಕವಾಗಿತ್ತು ನನಗೆ ಗೊತ್ತಿಲ್ಲ.
ಆಕೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಅವನಿಗೆ ಈ ಮೊದಲೇ ಮದುವೆಯಾಗಿತ್ತು. ಮದುವೆಯಾಗಲು ಮತಾಂತರ ಆಗು ಎಂದು ಒತ್ತಾಯಿಸಿರುವ ಸಂಶಯ ಇದೆ ಎಂದರು.
ಇದೊಂದು ಲವ್ ಜಿಹಾದ್ ಎಂದು ಆರೋಪಿಸಿದ ಹಿಂದೂ ಸಂಘಟನೆಗಳು ಪತಿಯ ಕೃತ್ಯಕ್ಕೆ ಪತ್ನಿ ಸಲ್ಮಾ ಬೆಂಬಲ ನೀಡಿದ್ದಾಳೆ. ಇಬ್ಬರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.