ಮಂಗಳೂರು: ದ.ಕ.ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಸಮಿತಿಯ ವತಿಯಿಂದ ‘ಸಹಬಾಳ್ವೆ ಮರಳಿ ಪಡೆಯಲು’ ಎಂಬ ಘೋಷವಾಕ್ಯ ದೊಂದಿಗೆ ನಗರದ ಪುರಭವನದಲ್ಲಿ ಸೌಹಾರ್ದ ಸಮ್ಮೇಳನವು ಗುರುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ ಸೈಯ್ಯದ್ ಮುಹ್ಮಮದ್ ಜಿಫ್ರಿ ಮುತ್ತುಕೋಯ ತಂಙಳ್, ಯುದ್ಧ ಮತ್ತು ಸಂಘರ್ಷವು ಇಸ್ಲಾಮಿನ ಸಿದ್ಧಾಂತವಲ್ಲ. ಧಾರ್ಮಿಕ ನಂಬಿಕೆಯೂ ಅಲ್ಲ. ಅದನ್ನು ಯಾವೊಬ್ಬ ಮುಸ್ಲಿಮನೂ ಅಂಗೀಕರಿಸುವುದಿಲ್ಲ ಎಂದು ಹೇಳಿದರು.
ಕುರ್‌ಆನಿನ ಅಧ್ಯಾಯಗಳನ್ನು ದುರ್ವ್ಯಾಖ್ಯಾನಗೊಳಿಸಿ ಇಸ್ಲಾಮನ್ನು ಕೋಮುವಾದಿಗಳ ಮತ್ತು ಭಯೋತ್ಪಾದಕರ ಧರ್ಮವನ್ನಾಗಿ ಬಿಂಬಿಸಲಾಗುತ್ತಿದೆ. ಧಾರ್ಮಿಕ ಅರಿವಿನ ಕೊರತೆಯೇ ಕೋಮುವಾದಕ್ಕೆ ಮೂಲ ಕಾರಣವಾಗಿದೆ. ದೇಶದ ಅಭಿವೃದ್ಧಿ ಹಾಗೂ ಏಕತೆಗೆ ಕೋಮುವಾದವು ಬಹಳ ಅಪಾಯಕಾರಿ ಎಂಬುದನ್ನು ಪ್ರತಿಯೊಬ್ಬ ಮುಸಲ್ಮಾನನೂ ತಿಳಿದುಕೊಂಡಿದ್ದಾನೆ. ಕೆಲವೊಂದು ನಾಮಧಾರಿಗಳು ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಕೋಮುವಾದವನ್ನು ಬಳಸಿದರೆ ಅದಕ್ಕೆ ಧರ್ಮದ ಸಿದ್ಧಾಂತ ಅಥವಾ ಧಾರ್ಮಿಕ ಗುರುಗಳು ಜವಾಬ್ದಾರರಲ್ಲ. ಆ ಸಂದೇಶವನ್ನು ಒಕ್ಕೊರಲಿನಿಂದ ಸಾರುವುದಕ್ಕಾಗಿ ಸರ್ವ ಧರ್ಮೀಯ ಗುರುಗಳು ಇಂದಿಲ್ಲಿ ಒಗ್ಗಟ್ಟಾಗಿ ಸೇರಿದ್ದೇವೆ ಎಂದು ಸೈಯ್ಯದ್ ಮುಹ್ಮಮದ್ ಜಿಫ್ರಿ ಮುತ್ತುಕೋಯ ತಂಙಳ್ ನುಡಿದರು.
ದೇವಾಲಯಗಳನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಿಸಲಾಗಿದೆ ಎಂಬ ಆರೋಪಕ್ಕೆ ಆಧಾರವಿಲ್ಲ. ಭಾರತಕ್ಕೆ ಇಸ್ಲಾಮ್ ಧರ್ಮ ಆಗಮಿಸಿದ ಸಂದರ್ಭದಲೇ ಇಲ್ಲಿನ ಶಿಲ್ಪಿಗಳು ದೇವಾಲಯಗಳ ವಾಸ್ತುಶೈಲಿಯಲ್ಲೇ ಮಸೀದಿಯನ್ನು ನಿರ್ಮಿಸಿದ್ದಾರೆ. ಅದನ್ನೀಗ ಕೆಲವರು ದೇವಸ್ಥಾನವೆಂದು ವಾದಿಸುವುದು ಖಂಡನೀಯ. ವೈವಿದ್ಯತೆಯಲ್ಲಿ ಏಕತೆ ಮತ್ತು ಧಾರ್ಮಿಕ ಸಾಮರಸ್ಯದಿಂದಲೇ ಭಾರತದ ಅಸ್ತಿತ್ವ ಅಡಗಿದೆ. ಭಾರತ-ಪಾಕ್ ಯುದ್ಧ ನಡೆದಾಗ ಭಾರತೀಯ ಮುಸ್ಲಿಮರು ಭಾರತದ ಜೊತೆ ನಿಂತಿದ್ದಾರೆ. ಭವಿಷ್ಯದಲ್ಲೂ ಭಾರತದ ಜೊತೆ ನಿಲ್ಲಲಿದ್ದಾರೆ. ಅದರಲ್ಲಿ ಯಾವುದೇ ಸಂಶಯಬೇಡ. ವಾಸಿಸುವ ನೆಲದ ಸಂಸ್ಕೃತಿಯನ್ನು ಗೌರವಿಸುವುದು ಹಾಗೂ ಪ್ರಜಾಸತ್ತಾತ್ಮಕ ನಿಯಮಗಳನ್ನು ಪಾಲಿಸುವುದು ಧಾರ್ಮಿಕ ಕರ್ತವ್ಯವಾಗಿದೆ ಎಂದು ಸೈಯ್ಯದ್ ಮುಹ್ಮಮದ್ ಜಿಫ್ರಿ ಮುತ್ತುಕೋಯ ತಂಙಳ್ ತಿಳಿಸಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಫೈಝಿ ವೆಳ್ಳಾಯಿಕ್ಕೋಡು ವಹಿಸಿದ್ದರು. ಇಬ್ರಾಹೀಂ ಬಾಖವಿ ಕೆ.ಸಿ.ರೋಡ್ ದುಆಗೈದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ಮಾಜಿ ಸಚಿವ ರಮಾನಾಥ ರೈ ಶುಭ ಹಾರೈಸಿದರು. ಜಂಇಯ್ಯತುಲ್ ಖುತ್ಬಾದ ಜಿಲ್ಲಾಧ್ಯಕ್ಷ ದ.ಕ. ಎಸ್.ಬಿ.ದಾರಿಮಿ ದಿಕ್ಸೂಚಿ ಭಾಷಣ ಮಾಡಿದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಸ್ವಾಗತಿಸಿದರು.
ವೇದಿಕೆಯಲ್ಲಿ ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಸೈಯದ್ ಅಮೀರ್ ತಂಙಳ್ ಕಿನ್ಯ, ಫಕ್ರುದ್ದೀನ್ ತಂಙಳ್, ಹಾಶಿರಲಿ ತಂಙಳ್ ಪಾಣಕ್ಕಾಡ್, ಎಸ್‌ವೈಎಸ್ ಕೇರಳ ರಾಜ್ಯ ಕಾರ್ಯದರ್ಶಿ ಹಮೀದ್ ಫೈಝಿ ಅಂಬಲಕ್ಕಡವು, ಎಸ್ಕೆಎಸ್ಸೆಸ್ಸೆಫ್ ಕೇರಳ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಪಂದಲ್ಲೂರು, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಝೈನುಲ್ ಆಬಿದೀನ್ ಜಿಫ್ರಿ ತಂಙಳ್, ಉಸ್ಮಾನುಲ್ ಫೈಝಿ ತೋಡಾರು, ತಾಜುದ್ದೀನ್ ದಾರಿಮಿ, ಸೈಯದ್ ಬಾಷಾ ತಂಙಳ್, ತಾಜುದ್ದೀನ್ ರಹ್ಮಾನಿ, ಹಾರಿಸ್ ಕೌಸರಿ, ಮುಸ್ತಫಾ ಹಾಜಿ ಕೆಂಪಿ, ಐ. ಮೊಯ್ದಿನಬ್ಬ ಹಾಜಿ ಎಂ. ಎಸ್.ಮುಹಮ್ಮದ್, ಕೆ. ಅಶ್ರಫ್, ಮುಹಮ್ಮದ್ ಮೋನು, ಕೆ.ಕೆ. ಶಾಹುಲ್ ಹಮೀದ್, ಅಬ್ಬಾಸ್ ಅಲಿ ಬೋಳಂತೂರು, ಮುಹಮ್ಮದ್ ಕುಂಜತ್ತಬೈಲ್, ಇಕ್ಬಾಲ್ ಮುಲ್ಕಿ, ಯು.ಪಿ. ಇಬ್ರಾಹೀಂ., ಸಿದ್ದೀಕ್ ಅಬ್ದುಲ್ ಖಾದರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಶೀದ್ ರಹ್ಮಾನಿ ಕಾರ್ಯಕ್ರಮ ನಿರೂಪಿಸಿದರು. ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ವಂದಿಸಿದರು.