dtvkannada

ನವದೆಹಲಿ: ಅಂಗವಿಕಲ ಬಾಲಕನಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿದ ಇಂಡಿಗೊ ಏರ್‌ಲೈನ್ಸ್‌ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಶನಿವಾರ ₹ 5 ಲಕ್ಷ ದಂಡ ವಿಧಿಸಿದೆ. ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು.

ಅಂಗವಿಕಲ ಬಾಲಕ ಭಯದಿಂದ ಗಾಬರಿಗೊಂಡ ಕಾರಣ ರಾಂಚಿ–ಹೈದರಾಬಾದ್ ವಿಮಾನ ಹತ್ತಲು ಸಿಬ್ಬಂದಿ ಅವಕಾಶ ನೀಡಿರಲಿಲ್ಲ. ಹೀಗಾಗಿ, ಆತನ ಜೊತೆಗಿದ್ದ ಪೋಷಕರು ವಿಮಾನ ಹತ್ತಿರಲಿಲ್ಲ ಎಂದು ಏರ್‌ಲೈನ್ಸ್ ಮೇ 9ರಂದು ತಿಳಿಸಿತ್ತು.

ಪ್ರಕರಣ ಕುರಿತಂತೆ ತನಿಖೆ ನಡೆಸಲು ಮೇ 9ರಂದು ಡಿಜಿಸಿಎ, ಮೂರು ಸದಸ್ಯರ ಸಮಿತಿಯನ್ನು ರಚಿಸಿತ್ತು. ಸಮಿತಿಯು ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಿದೆ. ಸಂಸ್ಥೆಯು ನಿಯಮ ಉಲ್ಲಂಘಿಸಿರುವುದು ತನಿಖಾ ವರದಿಯಿಂದ ತಿಳಿದು ಬಂದಿದೆ ಎಂದು ಡಿಜಿಸಿಎ ತಿಳಿಸಿದೆ.
‘ಅಂಗವಿಕಲ ಬಾಲಕನನ್ನು ನಡೆಸಿಕೊಳ್ಳುವಲ್ಲಿ ಇಂಡಿಗೊ ಏರ್‌ಲೈನ್ಸ್ ಲೋಪ ಎಸಗಿದೆ’ ಎಂದು ಡಿಜಿಸಿಎ ಹೇಳಿಕೆಯಲ್ಲಿ ತಿಳಿಸಿದೆ.

ಸಿಬ್ಬಂದಿ ಸಹಾನುಭೂತಿಯಿಂದ ನಡೆದುಕೊಂಡಿದ್ದರೆ ಮಗು ಶಾಂತವಾಗುತ್ತಿತ್ತು, ಭಯಪಡುತ್ತಿರಲಿಲ್ಲ. ಪ್ರವೇಶ ನಿರಾಕರಿಸುವ ಮೂಲಕ ಅನಗತ್ಯ ವಿವಾದ ಮಾಡಲಾಗಿದೆ ಎಂದು ಹೇಳಿಕೆ ಹೇಳಿದೆ. ಇಂತಹ ಸಂದರ್ಭಗಳಲ್ಲಿ ಅಸಾಧಾರಣ ಪ್ರತಿಕ್ರಿಯೆಗಳ ಅಗತ್ಯವಿರುತ್ತದೆ. ಆದರೆ, ಏರ್‌ಲೈನ್‌ನ ಸಿಬ್ಬಂದಿ ಈ ಸನ್ನಿವೇಶ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ನಾಗರಿಕ ವಿಮಾನಯಾನ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ಅದು ಹೇಳಿದೆ.

‘ಇದನ್ನು ಗಮನದಲ್ಲಿಟ್ಟುಕೊಂಡು ಡಿಜಿಸಿಎಯ ಸಕ್ಷಮ ಪ್ರಾಧಿಕಾರವು ಸಂಬಂಧಿತ ವಿಮಾನಯಾನ ನಿಯಮಗಳ ನಿಬಂಧನೆಗಳ ಅಡಿಯಲ್ಲಿ ಏರ್‌ಲೈನ್‌ಗೆ 5 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲು ನಿರ್ಧರಿಸಲಾಗಿದೆ‘ ಎಂದು ಡಿಜಿಸಿಎ ಉಲ್ಲೇಖಿಸಿದೆ.

By dtv

Leave a Reply

Your email address will not be published. Required fields are marked *

error: Content is protected !!