ಬಂಟ್ವಾಳ: ವಾಹನ ಬಂದು ತಿಂಗಳು ಆರು ಕಳೆದರು ಕಸ ವಿಲೇವಾರಿ ವಾಹನಕ್ಕೆ ಚಾಲಕ ಸಿಗದೇ ಸ್ವತ: ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆಯೇ ಚಲಾಯಿಸಿದ ಘಟನೆ ಬಂಟ್ವಾಳದ ಪೆರುವಾಯಿಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಫೀಝಾ ತಸ್ಲಿ ಈ ರೀತಿ ಚಾಲಕಿಯಾಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಯಾಗಿದ್ದು, ಈಕೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಮುಸ್ಲಿಂ ಸಮುದಾಯದಿಂದ ಬಂದ ಈ ಮಹಿಳೆ ಚಾಲಕಿಯಾಗಿ ದುಡಿಯುತ್ತಿರುವುದು ಸಮುದಾಯದ ಕೆಲವರ ಕೆಂಗಣ್ಣಿಗೆ ಪಾತ್ರವಾದರೂ, ಮನೆ ಮಂದಿಯ ಸಂಪೂರ್ಣ ಸಹಕಾರದಿಂದಾಗಿ ನಫೀಝಾ ತನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಪೆರುವಾಯಿ ಗ್ರಾಮ ಪಂಚಾಯತ್ ಗೆ ಕಸ ವಿಲೇವಾರಿಗಾಗಿ ಒಂದು ವಾಹನವನ್ನು ಖರೀದಿಸಲಾಗಿದೆ. ಎಲ್ಲಾ ಪಂಚಾಯತ್ ನಂತೆ ಈ ಗ್ರಾಮಪಂಚಾಯತ್ ಗೆ ಕೂಡಾ ಕಸ ವಿಲೇವಾರಿಗಾಗಿ ವಿಲೇವಾರಿ ಘಟಕ ಮತ್ತು ವಾಹನದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಆದರೆ ವಾಹನ ಬಂದು ಆರು ತಿಂಗಳು ಕಳೆದರೂ, ವಾಹನಕ್ಕೆ ಸರಿಯಾದ ಚಾಲಕರು ಸಿಗದ ಹಿನ್ನಲೆಯಲ್ಲಿ ಬಂದ ವಾಹನ ಘಟಕದಲ್ಲೇ ಪಾರ್ಕ್ ಮಾಡುವಂತಹ ಸ್ಥಿತಿ ಬಂದೊದಗಿತ್ತು.
ಆದ್ದರಿಂದ ಖಾಯಂ ವಾಹನ ಚಾಲಕಿ ಬರುವ ತನಕ ತಾನೇ ವಾಹನ ಚಾಲಕಿಯಾಗುವ ನಿರ್ಧಾರವನ್ನು ಕೈಗೊಂಡಿದ್ದಾರೆ. ನಫೀಝಾ ನಿರ್ಧಾರಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತ್ ಅಧ್ಯಕ್ಷರೂ ಬೆಂಬಲ ಸೂಚಿಸಿದ ಹಿನ್ನಲೆಯಲ್ಲಿ ನಫೀಝಾ ಕಸ ವಿವೇವಾರಿ ವಾಹನದಲ್ಲಿ ಕಸ ಸಂಗ್ರಹಕ್ಕೆ ಶುರು ಮಾಡಿದ್ದಾರೆ.ನಫೀಸಾರವರ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.