ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಚರಣ್ ರಾಜ್ ರೈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಿಶೋರ್ ಪೂಜಾರಿ ಕಲ್ಲಡ್ಕ ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ.
ಹಿಂದೂ ಸಂಘಟನೆ ಕಾರ್ತಿಕ್ ಮೇರ್ಲ ಎಂಬವರ ಹತ್ಯೆ ಆರೋಪಿಯಾಗಿದ್ದ ಚರಣ್ ರಾಜ್ ಅವರನ್ನು ಶನಿವಾರ ಸಂಜೆ ಮಾರಕ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಚರಣ್ ರಾಜ್ ಜತೆಗಿದ್ದ ನವೀನ್ ನೀಡಿದ ದೂರಿನಂತೆ ಕಿಶೋರ್ ಪೂಜಾರಿ ತಂಡ ಈ ಕೃತ್ಯ ಎಸಗಿರುವ ಬಗ್ಗೆ ಸುಳಿವು ದೊರೆತಿದೆ.
ಮೆಡಿಕಲ್ ಶಾಪ್ ನ ಹೊರಗೆ ಕಾರಿನ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಚರಣ್ ರಾಜ್ ಮೇಲೆ ಮೂವರು ತಲವಾರಿನಿಂದ ಹಲ್ಲೆ ನಡೆಸಿದ್ದು ಇದನ್ನು ತಡೆಯಲು ನವೀನ್ ಹೋದಾಗ ಇವರ ಪೈಕಿ ಪರಿಚಿತ ಕಿಶೋರ್ ಪೂಜಾರಿ ಇದ್ದದನ್ನು ಗುರುತಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳು ತಲವಾರು ಹಾಗೂ ರಾಡ್ ನಿಂದ ಹಲ್ಲೆ ಮಾಡಿದ ಪರಿಣಾಮ ಚರಣ್ ರಾಜನ ಕುತ್ತಿಗೆಗೆ ತೀವ್ರತರದ ಬಾರಿ ಗಾಯ ತಲೆಯಲ್ಲಿ ರಕ್ತ ಗಾಯಗಳಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. 2 ವರ್ಷದ ಹಿಂದೆ ಆರ್ಯಾಪು ಗ್ರಾಮದ ಮೇರ್ಲ ವಾಸಿ ಕಾರ್ತಿಕ್ ಎಂಬಾತನನ್ನು ಸಂಪ್ಯ ಪೊಲೀಸ್ ಠಾಣೆಯ ಮುಂಭಾಗ ಗಣೇಶೋತ್ಸವ ಪೆಂಡಲ್ ಒಳಗಡೆ ಕೊಲೆ ನಡೆಸಿದ ಪ್ರಕರಣದಲ್ಲಿ ಚರಣ್ ರಾಜ್ ಆರೋಪಿಯಾಗಿದ್ದು ಇದೇ ದ್ವೇಷದಿಂದ ಕಾರ್ತಿಕನ ಸ್ನೇಹಿತ ಕಿಶೋರ್ ಹಾಗೂ ಇತರರು ಈ ಕೃತ್ಯ ಎಸಗಿದ್ದು ಆರೋಪಿಗಳನ್ನು ಕೃತ್ಯದ ವೇಳೆ ನಾನು ನೋಡಿದ್ದು ಮುಂದಕ್ಕೆ ನೋಡಿದರೆ ಗುರುತಿಸುತ್ತೇನೆ ಎಂಬುದಾಗಿ ನವೀನ್ ಪೊಲೀಸರಿಗೆ ದೂರು ನೀಡಿದ್ದಾರೆ .