ವಿಶ್ವ ಪರಿಸರ ದಿನದಲ್ಲೊಂದು ನೆನಪಿನ ಬರಹ..
ಪ್ರಕೃತಿಯ ಗಿಡ ಮರಗಳು ಅದೆಷ್ಟು ತರಹ..
ಮುಂಡೋವು ಗಿಡದ ಅಚ್ಚಳಿಯದ ಹೊಳಪು..
“ಬಸಿರ್” ಮರದ ಮರೆಯಲಾರದ ನೆನಪು..
✍️ ಎಸ್ ಪಿ ಬಶೀರ್ ಶೇಕಮಲೆ
ನಮ್ಮ ಮನೆಯ ಮಗ್ಗುಲಲ್ಲಿ ಹರಿಯುತ್ತಿರುವ ತೋಡಿನ ಬದಿಯಲ್ಲಿ ಬಲ್ಲೆ ಬಲ್ಲೆಯಾಗಿ ಬೆಳೆಯುವ ಉದ್ದುದ್ದದ ವಾಲೆ ರೂಪದ ರೆಂಬೆ ಕೊಂಬೆಗಳನ್ನು ಹೊಂದಿರುವ ಗಿಡಗಳು..
ನಾವು ಸಣ್ಣದಿರುವಾಗಳೇ ಉಂಟು,ಈಗಲೂ ಉಂಟು..
ಅದುವೇ
ನಮ್ಮ ಆಡುಭಾಷೆಯಲ್ಲಿ ಮುಂಡೋವು ಗಿಡ
ಹಿಂದಿನ ಕಾಲದಲ್ಲಿ
ಆ ಮುಂಡೋವು ಗಿಡದ ವಾಲೆಯಿಂದ ಚಾಪೆ ತಯಾರಿಸುತ್ತಿದ್ದರು
ಮನೆಯೊಳಗೆ ಮಣ್ಣಿನ ನೆಲದಲ್ಲಿ ಗೋಣಿ ಹಾಕಿ ಅದರ ಮೇಲೆ ಒಂದು ಬಟ್ಟೆ ಹಾಸಿ
ಮಲಗುತ್ತಿದ್ದ ಕಾಲದಲ್ಲಿ
ಇದು ವಾಲೆ ಪಾಯಿ ಅಂತ ಪ್ರಸಿದ್ಧಿ ಪಡೆದಿತ್ತು
ಹಳೆಯ ಕಾಲದಲ್ಲಿ ಮಾಂಕು ಎಂಬವರ ಕುಟುಂಬದವರು ಬಂದು ಕಡಿದು ಕೊಂಡು ಹೋಗುತ್ತಿದ್ದದ್ದನ್ನು ಕಣ್ಣಾರೆ ಕಂಡ ನೆನಪುಂಟು
ಅದೆಲ್ಲವೂ ಈಗಲೂ ನೆನಪಿನಂತರಾಳದ ಗಂಟು..
ಅವರು ಆ ಮುಂಡೋವು ಗಿಡದ ವಾಲೆಯಿಂದ ಚಾಪೆ ತಯಾರಿಸಿ ಮಾರಾಟ ಮಾಡುತ್ತಿದ್ದರು.
ಕಾಲಕ್ರಮೇಣ ಹುಲ್ಲಿನಿಂದ ತಯಾರಿಸಿದ ಚಾಪೆ
ಪುಲ್ಲಿ ಪಾಯಿ ಬಂದ ನಂತರ ವಾಲೆ ಪಾಯಿ ಮಾಯವಾಯಿತು
ಈಗ ಪುಲ್ಲಿ ಪಾಯಿ ಕೂಡಾ ಎಲ್ಲೋ ಮಾಯವಾಗಿದೆ
ಈಗ
ಎಲ್ಲವೂ
ಪ್ಲಾಸ್ಟಿಕ್, ಫೈಬರ್, ಕೋಯರ್, ಫೋಮ್, ಸ್ಪ್ರಿಂಗ್ ಮಯ..
ಹೌದು,
ಈ ಜಗತ್ತೇ ಒಂದು ವಿಸ್ಮಯ..
ಅದೇ ತೋಡಿನ ಬದಿಯಲ್ಲಿ ಒಂದು ಮರ ಇದೆ
ಆ ಮರ ನಾನು ಸಣ್ಣದಿರುವಾಗಲೇ ಇತ್ತು
ಇಂದೂ ಇದೆ..
ವಿಶೇಷ ಏನೂ ಇಲ್ಲ..
ಆ ಮರದ ಹೆಸರು
ಬಸಿರ್ಂಡೆ ಮರೊ..
ಆ ಮರಕ್ಕೆ ಬಸಿರ್ ನ ಮರ ಎಂದು ನನ್ನ ಹೆಸರು ಇಟ್ಟದ್ದಾ ಅಂತ ನಾನು ಚಿಕ್ಕವನಿರುವಾಗ ನನಗೂ ಒಂದು ಜಿಜ್ಞಾಸೆ ಇತ್ತು..
ಅಲ್ಲ ಅಲ್ಲ…
ಅದೂ ಒಂದು ಮರದ ಪ್ರಭೇದ
ಹಲಸಿನ ಮರ
ಹುಣಸೆ ಮರ
ಸಾಗುವಾನಿ ಮರ
ಮಾಗುವಾನಿ ಮರ
ಮಾವಿನ ಮರ
ಬೇವಿನ ಮರ
ಪೇರಳೆ ಮರ
ನೇರಳೆ ಮರ
ಗಾಳಿ ಮರ
ಗೋಲಿ ಮರ
ಹೀಗೆ ಇದೂ ಒಂದು
ಬಸಿರ್ ಮರ..
ಆ ಮರದ ಪ್ರಭೇದ ಮುಂದೆಯೂ ಇರಲಿ ಅಂತ ಅದರ ಸವಿ ನೆನಪಿಗಾಗಿ ಕಳೆದ ವರ್ಷ ಒಂದು ಗಿಡ ನೆಟ್ಟಿದ್ದೆ
ಈ ವರ್ಷ ಕೂಡಾ ಇನ್ನೊಂದು
ಬಸಿರ್ಂಡೆ ಮರೊ ನೆಟ್ಟೆ…
ಮರದ ಹೆಸರೂ ಬಸಿರು.
ಉಸಿರಿಗಾಗಿ ಹಸಿರು.