ಹುಬ್ಬಳ್ಳಿ: ಆರ್ ಎಸ್ ಎಸ್ ಸಂಘಟನೆ ದೇಶಭಕ್ತಿ ಹಾಗೂ ಜನರ ಸೇವೆಯಲ್ಲಿ ತೊಡಗಿದೆ. ಆರ್‌ಎಸ್‍ಎಸ್ ಉತ್ತಮ ದೇಶಭಕ್ತಿ ಕೆಲಸ ಮಾಡಿದೆ. ಇಂತಹ ಸಂಘಟನೆ ಬಗ್ಗೆ ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಎಲ್ಲಾ ಕಡೆಗಳಲ್ಲಿ ಆರ್‌ಎಸ್‍ಎಸ್ ಚಡ್ಡಿ ಸುಡುತ್ತೇವೆ ಎನ್ನುವ ಕೈ ನಾಯಕರ ಹೇಳಿಕೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‍ಎಸ್ ಸಂಘಟನೆಯ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಆದರೆ ಜನರಿಗೆ ಆರ್‌ಎಸ್‍ಎಸ್ ಬಗ್ಗೆ ಎಲ್ಲವೂ ತಿಳಿದಿದೆ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಆರ್‌ಎಸ್‍ಎಸ್ ವಿರೋಧಿಗಳು. ಅವರ ಇಂತಹ ಧೋರಣೆಯಿಂದ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಕರ್ನಾಟಕದಲ್ಲಿಯೂ ಹೀಗೆ ಆಗಲಿದೆ ಎಂದು ಭವಿಷ್ಯ ನುಡಿದರು.
ಆರ್‌ಎಸ್‍ಎಸ್ ಜನರು ಸಂಕಷ್ಟದಲ್ಲಿದ್ದಾಗ ಸಹಾಯ ಮಾಡಿದೆ. ಇದಕ್ಕೆ ತನ್ನದೆಯಾದ ಇತಿಹಾಸವಿದೆ. ಆದರೆ ಕಾಂಗ್ರೆಸ್ ಇದನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಟೀಕಿಸಿದರು.
ಇನ್ನೂ ಪಠ್ಯ-ಪುಸ್ತಕ ವಿಚಾರದಲ್ಲೂ ಕಾಂಗ್ರೆಸ್ ರಾಜಕಾರಣ ಮಾಡತ್ತಿದೆ. ಕಾಂಗ್ರೆಸ್ ನಾಯಕರ ಆರೋಪಕ್ಕೆ ನಮ್ಮ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಉತ್ತರ ನೀಡಿದ್ದಾರೆಂದರು.