ಭಟ್ಕಳ: ಮನೆ ಕಡೆ ಸಾಗುತ್ತಿದ್ದ ಯುವಕನೋರ್ವ ದಾರಿ ಮಧ್ಯೆ ದ್ವಿಚಕ್ರ ವಾಹನ ಸ್ಕಿಡ್ ಆಗಿ ಗಂಭೀರ ರಕ್ತಸ್ರಾವದಿಂದ ಸಾವನ್ನಪ್ಪಿರುವ ದಾರುಣ ಘಟನೆ ಭಟ್ಕಳದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಮೃತಪಟ್ಟ ದುರ್ದೈವಿ ಮುರ್ಡೇಶ್ವರದ ಗುಮ್ಮನ ಹಕ್ಕಲ ನಿವಾಸಿ ಹೋಟೆಲ್ ಉದ್ಯಮಿ ದಿನೇಶ ಈರಪ್ಪ ನಾಯ್ಕ ಎಂದು ತಿಳಿದು ಬಂದಿದೆ.
ದಿನೇಶ ಈರಪ್ಪ ನಾಯ್ಕ ಬೈಕಿನಲ್ಲಿ ಮುರ್ಡೇಶ್ವರದಿಂದ ಗುಮ್ಮನಹಕ್ಕಲಿನಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದ ಸಂದರ್ಭ ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ತೀವ್ರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ.
ತಡರಾತ್ರಿ ಆದ ಕಾರಣ ದಾರಿಯಲ್ಲಿ ಯಾರೂ ಇಲ್ಲದಿರುವುದಕ್ಕೆ ರಕ್ರಸ್ರಾವವಾಗಿ ಸಾವನ್ನಪ್ಪಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.
ಇಂದು ಬೆಳಗ್ಗೆ 7 ಗಂಟೆ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದವರು ಯಾರೋ ದಿನೇಶ್ ನನ್ನು ನೋಡಿ ಕೂಡಲೇ ಠಾಣೆಗೆ ತಿಳಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆದರೆ ಅಷ್ಟೊತ್ತಿಗೆ ದಿನೇಶ್ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ. ನಂತರ ಮುರ್ಡೇಶ್ವರದಲ್ಲಿಯೇ ಶವಪರೀಕ್ಷೆಯನ್ನು ನಡೆಸಲಾಯಿತು. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.