ಪುತ್ತೂರು : ಪ್ರವಾದಿ ಮುಹಮ್ಮದ್ (ಸ.ಅ.) ರವರ ನಿಂದನೆ ಅಕ್ಷಮ್ಯ, ದೇಶದ ಘನತೆಗೆ ಕಳಂಕವನ್ನುಂಟುಮಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನೂಪೂರ್ ಶರ್ಮ ಹಾಗೂ ನವೀನ್ ಜಿಂದಾಲ್ ರವರನ್ನು ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಳಿಸಿದರೆ ಸಾಲದು, ಅವರ ಹೇಳಿಕೆ ದೇಶವನ್ನೇ ಅಭದ್ರ,ಅಶಾಂತಿ ಸ್ಥಿತಿಗೆ ತಲುಪಿಸಿದೆ.
ಇಂತಹ ಹೇಳಿಕೆಗಳು ಸಮಾಜದಲ್ಲಿ ಪರಸ್ಪರ ಕೋಮು ದ್ವೇಷವನ್ನು ಉಂಟುಮಾಡಿ ಸೌಹಾರ್ಧತೆಯನ್ನು ಕೆಡಿಸುವ ಪ್ರಯತ್ನ ವಾಗಿದೆ.ಆದುದರಿಂದ ಸರಕಾರ ಹಾಗೂ ಕಾನೂನು ಕೂಡಲೇ ಇಬ್ಬರಿಗೂ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಎಸ್ ವೈ ಎಸ್ ಈಸ್ಟ್ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಸ್ವಂತ ಶರೀರಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ.)ರವರನ್ನು ನಿಂದಿಸುವ ಯಾವುದೇ ಪದಗಳನ್ನು ಸಹಿಸಲು ಮುಸ್ಲಿಮರಿಗೆ ಸಾಧ್ಯವಿಲ್ಲ.ಮುಸ್ಲಿಂ ಜಗತ್ತನ್ನು ಭಾರತದ ವಿರುದ್ಧ ಎತ್ತಿ ಕಟ್ಟುವ ಈ ಕುತ್ಸಿತ ಪ್ರಯತ್ನವನ್ನು ಭಾರತ ರಾಷ್ಟ್ರದ ಪ್ರಜೆಗಳು ಒಕ್ಕೊರಲಿನಿಂದ ಖಂಡಿಸಬೇಕೆಂದು ಅಭಿಪ್ರಾಯ ಪಟ್ಟಿದೆ.
ಈ ಬಗ್ಗೆ ಇತ್ತೀಚೆಗೆ ನಡೆದ ಎಸ್‌ವೈಎಸ್ ದ.ಕ.ಈಸ್ಟ್ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಖಂಡನಾ ನಿರ್ಣಯವನ್ನು ಕೈಗೊಳ್ಳಲಾಯಿತು. ಎಸ್‌ವೈಎಸ್ ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಅಬೂಬಕ್ಕರ್ ಸಅದಿ ಮಜೂರು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಂಬಿಎಂ ಸ್ವಾದಿಖ್ ಮಲೆಬೆಟ್ಟು, ಕೋಶಾಧಿಕಾರಿ ಜಿ ಎಂ ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ, ರಾಜ್ಯ ಕಾರ್ಯದರ್ಶಿ ಕಾಸಿಂ ಪದ್ಮುಂಜ, ರಾಜ್ಯ ಸಮಿತಿ ಸದಸ್ಯ ಎಂ ಎಚ್ ಖಾದರ್ ಹಾಜಿ ಉಪ್ಪಿನಂಗಡಿ, ಕ್ಯಾಬಿನೆಟ್ ಸದಸ್ಯರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯ ಚರ್ಚೆಗಳಲ್ಲಿ ಭಾಗವಹಿಸಿದ್ದರು.