ವಿಟ್ಲ: ನಿನ್ನೆ ತಡರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಲವು ಮನೆಗಳು ಜಲಾವೃತವಾಗಿದೆ.
ವಿಟ್ಲದ ಅಡ್ಡದ ಬೀದಿ, ಬೊಬ್ಬೆಕೇರಿಯ ವಿದ್ಯಾನಗರದಲ್ಲಿರುವ ಮನೆಗಳು ಜಲಾವೃತಗೊಂಡಿದೆ. ಸಾಲೆತ್ತೂರು ಕಟ್ಟೆ ಬಳಿ ಗುಡ್ಡ ರಸ್ತೆಗೆ ಜರಿದು, ಮನೆಗಳು ಅಪಾಯದ ಅಂಚಿನಲ್ಲಿವೆ.
ವಿಟ್ಲದ ಬಾಕಿಮಾರ್ ಗದ್ದೆಯ ಪಕ್ಕದಲ್ಲಿರುವ ಸಾರ್ವಜನಿಕ ಚರಂಡಿಯಲ್ಲಿ ಮೆಸ್ಕಾಂ ಗುತ್ತಿಗೆದಾರರು ಕಾಮಗಾರಿ ನಡೆಸುವ ವೇಳೆ ಪೈಪ್ ಗಳನ್ನು ಚರಂಡಿ ಮೂಲಕ ಅಳವಡಿಸಿದ್ದರಿಂದ ಚರಂಡಿಯಲ್ಲಿ ನೀರು ಹರಿಯದೇ ಪಕ್ಕದ ಮನೆ ಮತ್ತು ಅಂಗಡಿಗಳ ಆವರಣಕ್ಕೆ ನುಗ್ಗಿದೆ. ಅದಲ್ಲದೇ ಅಡ್ಡದ ಬೀದಿ ಕೂಡಾ ಸಂಪೂರ್ಣವಾಗಿ ಜಲಾವೃತವಾಗಿದೆ.
ವಿಟ್ಲದ ಬೊಬ್ಬೆಕೇರಿ ವಿದ್ಯಾನಗರದಲ್ಲಿರುವ ಮೋನಪ್ಪ ಶೆಟ್ಟಿ, ದಿನೇಶ್ ಪೂಜಾರಿ, ನಾರಾಯಣ ಗೌಡ, ನಾರಾಯಣ ಪೂಜಾರಿಯವರ ಮನೆ ಹಾಗೂ ಇತರ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿ ತೊಂದರೆ ಅನುಭವಿಸಿದ್ದಾರೆ.
ಕೆಲವು ಖಾಸಗಿ ವ್ಯಕ್ತಿಗಳು ಚರಂಡಿ ಒತ್ತುವರಿ ಮಾಡಿದ್ದರಿಂದ ಮತ್ತು ಹೆದ್ದಾರಿಯ ಕಾಮಗಾರಿ ವೇಳೆ ಚರಂಡಿ ಮುಚ್ಚಿದ್ದರಿಂದ ನೀರು ಹರಿಯಲು ವ್ಯವಸ್ಥೆ ಇಲ್ಲದೇ ಪ್ರವಾಹ ಸೃಷ್ಟಿಯಾಗಿದೆ. ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗುವ ಒಳದಾರಿ ಕೂಡಾ ಜಲಾವೃತಗೊಂಡು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ.