ಮಂಗಳೂರು: ಜಿಲ್ಲೆಯಲ್ಲಿ ವರುಣನ ಅಬ್ಬರ ತಗ್ಗದ ಕಾರಣ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.
ಭಾರಿ ಮಳೆಯ ಕಾರಣ ಉಡುಪಿ ಜಿಲ್ಲೆಯಾದ್ಯಂತ ಇಂದು ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ರಜೆ ಘೋಷಿಸಿ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ದಿನಾಂಕ 05/07/ 2022ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ, Diploma/ITI ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಸಾರಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೇಳಿದ್ದಾರೆ.
ಜಿಲ್ಲೆಯ ಹಲವೆಡೆ ಪ್ರವಾಹದ ಭೀತಿಯಿದ್ದು ರಜೆಯ ಸಮಯದಲ್ಲೂ ಮಕ್ಕಳು ತಮ್ಮ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಳ್ಳಲು ತಿಳಿಸಲಾಗಿದೆ.
ಇನ್ನು ಶಿರಶಿ ಭಾಗದಲ್ಲೂ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಭಾರೀ ಮಳೆ ಬೀಳುವ ಮುನ್ಸೂಚನೆಯನ್ನು, ಹವಾಮಾನ ಇಲಾಖೆ ಮೊದಲೇ ನೀಡಿತ್ತು .ಮಳೆ ಜು.7 ರ ತನಕ ಮುಂದುವರಿಯಲಿದೆ. ಶಾಲಾ ಮಕ್ಕಳ ಹಾಗೂ ಪಿಯು, ಪದವಿ ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ಮಂಗಳವಾರ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ಮುಂತಾದ ಶೈಕ್ಷಣಿಕ ಸಂಸ್ಥೆಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದೆ. ಈ ಸಂಬಂಧ ಆದೇಶವನ್ನು ಜಿಲ್ಲಾಧಿಕಾರಿ ಹೊರಡಿಸಿದ್ದಾರೆಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ತಿಳಿಸಿದ್ದಾರೆ.
ಗಂಗಾವಳಿ ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಹಳವಳ್ಳಿ,ಹೆಗ್ಗಾರ, ಡೊಂಗ್ರಿ ರಾಷ್ಟ್ರೀಯ ಹೆದ್ದಾರಿ 66 ರಿಂದ ಸಂಪರ್ಕ ಕಡಿದುಕೊಂಡಿವೆ.