ಮಂಗಳೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಬಾರೀ ಮಳೆಗೆ ನಾಳೆಯು ಶಾಲೆ ಕಾಲೇಜು ಅಂಗನವಾಡಿಗಳಿಗೆ ರಜೆ ನೀಡಿ ವಿವಿಧ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಗೆ ದ.ಕ ಉಡುಪಿ, ಕಾಸರಗೋಡು ಜಿಲ್ಲೆ ಸಂಪೂರ್ಣ ಅಸ್ತವ್ಯಸ್ತವಾಗಿದ್ದು ಹಲವೆಡೆ ಹಾನಿ ನಷ್ಟಗಳು ಸಂಭವಿಸಿವೆ. ಮುಂಜಾಗೃತಾ ಕ್ರಮವಾಗಿ ನಾಳೆಯೂ(ಜುಲೈ 6) ದ.ಕ , ಉಡುಪಿ, ಕಾಸರಗೋಡು ಜಿಲ್ಲೆಯಾದ್ಯಂತ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ನದಿ-ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ಸಮುದ್ರದ ಅಬ್ಬರ ಹೆಚ್ಚಾಗಿದೆ.
ಕೇರಳದಲ್ಲಿರುವ ಕನ್ನಡ ಭಾಷಿಕ ಜಿಲ್ಲೆ ಕಾಸರಗೋಡಿನ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಾಸರಗೋಡು ನಗರದಲ್ಲಿಯೂ ಹಲವು ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕುಂಬಳೆಯ ಪ್ರಸಿದ್ಧ ಶ್ರೀಶಂಕರ ನಾರಾಯಣ ದೇಗುಲವೂ ನೀರಿನಲ್ಲಿ ಮುಳುಗಿದೆ. ಜಿಲ್ಲೆಯಾದ್ಯಂತೆ ಸೋಮವಾರ ರಾತ್ರಿಯಿಂದ ವ್ಯಾಪಕ ಮಳೆ ಸುರಿಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಭಾರಿ ಮಳೆಯಿಂದ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಬಂಟ್ವಾಳ ತಾಲ್ಲೂಕಿನ ಸಾರಡ್ಕ ಚೆಕ್ಪೋಸ್ಟ್ ಬಳಿ ಗುಡ್ಡ ಕುಸಿದಿದ್ದು, ಸ್ಥಳೀಯ ಆಡಳಿತ ಸಿಬ್ಬಂದಿ ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ 84 ಮಿಮೀ ಮಳೆ ದಾಖಲಾಗಿದೆ. ಕಾರ್ಕಳ 77, ಹೆಬ್ರಿ 142, ಕುಂದಾಪುರ 78, ಬೈಂದೂರು 68, ಉಡುಪಿ 59, ಬ್ರಹ್ಮಾವರ 86, ಕಾಪು 57 ಮಿಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಇಂದು ಸರಾಸರಿ 100 ಮಿಮೀಗೂ ಹೆಚ್ಚು ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹೇಳಿರುವ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಮುಂದುವರಿಸಿದೆ.
ಬ್ರಹ್ಮಾವರ ತಾಲೂಕಿನಲ್ಲೂ ವ್ಯಾಪಕ ಮಳೆಯಾಗಿದ್ದು, ಸೀತಾ ನದಿ ತುಂಬಿ ಹರಿಯುತ್ತಿದೆ. ಬ್ರಹ್ಮಾವರದ ಮಟಪಾಡಿ, ನೀಲಾವರ, ಹನೇಹಳ್ಳಿ ಪರಿಸರದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಮಟಪಾಡಿಯ ಭತ್ತದ ಗದ್ದೆಗಳಲ್ಲಿ ನೆರೆ ನೀರು ನಿಂತಿದೆ. ತೆಂಗಿನ ತೋಟಗಳಿಗೆ ನದಿ ನೀರು ನುಗ್ಗಿದೆ. ಕಡಲ ಕೊರೆತದ ಸಮಸ್ಯೆಯೂ ಕಾಣಿಸಿಕೊಂಡಿದೆ.