ಜಜ್ಪುರ: ಸಾಮೂಹಿಕ ಅತ್ಯಾಚಾರದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಬಾಲಕಿಯೊಬ್ಬಳು ಶಾಲಾ ಕಟ್ಟಡದಿಂದ ಕೆಳಕ್ಕೆ ಜಿಗಿದ ಘಟನೆ ಒಡಿಶಾ ರಾಜ್ಯದ ಜಜ್ಪುರದಲ್ಲಿ ನಡೆದಿದೆ. ಕೆಳಕ್ಕೆ ಜಿಗಿದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರೀ ಮಳೆಯಾಗುತ್ತಿದ್ದರಿಂದ ಶಾಲೆಯಲ್ಲಿ ಆಶ್ರಯ ಪಡೆಯುವಂತೆ ಬಾಲಕಿ ಮತ್ತು ಆಕೆಯ ಸಹೋದರನಿಗೆ ಸಲಹೆ ನೀಡಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಕಳಿಂಗ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ರಾತ್ರಿ ಒಡಿಶಾದ ಕಿಯೋಂಜಾರ್ ಜಿಲ್ಲೆಯ ನಿವಾಸಿಯಾಗಿರುವ ಬಾಲಕಿ ತನ್ನ ಸಹೋದರನೊಂದಿಗೆ ತನ್ನ ಸಹೋದರಿಯ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ಬಸ್‌ನಿಂದ ಇಳಿದಾಗ, ಆ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿತ್ತು. ಈ ವೇಳೆ ಎದುರಾದ ಗುಂಪು ನೀವು ಶಾಲಾ ಕಟ್ಟಡದಲ್ಲಿ ಉಳಿದುಕೊಳ್ಳಬಹುದು, ಮಳೆ ನಿಂತ ಬಳಿಕ ತಮ್ಮ ಊರಿಗೆ ಹೋಗಬಹುದು ಎಂದು ಸಲಹೆ ನೀಡಿದ್ದರು.
ಅದರಂತೆ ಅವರು ಶಾಲೆಯಲ್ಲಿ ಆಶ್ರಯ ಪಡೆದಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಹಿಂತಿರುಗಿದ ಐವರ ಗುಂಪು ಬಾಲಕಿಯ ಸಹೋದರನನ್ನು ಥಳಿಸಿ ಓಡಿಸಿ, ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದರು. ಈ ವೇಳೆ ಶಾಲೆಯ ಕಟ್ಟಡದ ಮೇಲ್ಛಾವಣಿಯ ಮೇಲೆ ಓಡಿದ ಬಾಲಕಿ, ಅಲ್ಲಿಂದ ಜಿಗಿದು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಾಲಕಿಯ ಸಹೋದರ ಸಹಾಯಕ್ಕಾಗಿ ಕಿರುಚಿದಾಗ ಸ್ಥಳೀಯರು ಧಾವಿಸಿ ಬಂದಿದ್ದು, ನಂತರ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದರು.
ಸಹೋದರ ನೀಡಿದ ಹೇಳಿಕೆಯನ್ನು ಆಧರಿಸಿ ಎಲ್ಲಾ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ಜಾರಿಯಲ್ಲಿದೆ ಎಂದು ಕಳಿಂಗ ನಗರ ಠಾಣಾಧಿಕಾರಿ ಹೇಳಿದ್ದಾರೆ.