ಮಂಗಳೂರು/ಉಡುಪಿ: ಮೆಸ್ಕಾಂ ಅಧಿಕಾರಿಗಳ ಪ್ರಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ಅಧಿಕೃತವೂ ಇಲ್ಲ, ಅನಧಿಕೃತವೂ ಇಲ್ಲ. ಆದರೂ ಪ್ರತಿದಿನ ಯಾವುದಾದರೂ ಒಂದು ಕಾರಣಕ್ಕೆ ಉಭಯ ಜಿಲ್ಲೆಗಳ ಮನೆಗಳಲ್ಲಿ ವಿದ್ಯುತ್ ದೀಪ ಉರಿಯುವುದಿಲ್ಲ, ಮಿಕ್ಸಿ ತಿರುಗುವುದಿಲ್ಲ, ಫ್ರಿಡ್ಜ್ ಚಾಲೂ ಆಗುವುದಿಲ್ಲ!
ಮಂಗಳೂರು, ಉಡುಪಿಯ ನಗರ ಪ್ರದೇಶದಲ್ಲಿ ಈ ಸಮಸ್ಯೆ ಅಷ್ಟಾಗಿ ಗಮನಕ್ಕೆ ಬಾರದಿರಬಹುದು. ಆದರೆ ಉಭಯ ಜಿಲ್ಲೆಗಳ ಗ್ರಾಮಾಂತರದಲ್ಲಿ ಪವರ್ ಕಟ್ ನಿತ್ಯವೂ ಇದೆ. ಅದಕ್ಕೆ ಗಾಳಿಮಳೆ ಕಾರಣ ಇರಬಹುದು. ಮೆಸ್ಕಾಂ ಪ್ರಕಾರ ವಿದ್ಯುತ್ ಕಡಿತಕ್ಕೆ ಮೂಲ ಕಾರಣ ಮಳೆಗಾಲ. ಆದರೆ ನಾಗರಿಕರು ಅನುಭವಿಸುತ್ತಿರುವುದು ಅಘೋಷಿತ ವಿದ್ಯುತ್ ಕಡಿತ.
ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ, ಮೂಲ್ಕಿ, ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಅಘೋಷಿತ ವಿದ್ಯುತ್ ಕಡಿತಕ್ಕೆ ಕೊನೆ ಯಿಲ್ಲ. ದಿನದಲ್ಲಿ ಕನಿಷ್ಠವೆಂದರೂ 5-10 ಬಾರಿ ವಿದ್ಯುತ್ ಕಣ್ಣಾಮುಚ್ಚಾಲೆ ನಡೆದೇ ನಡೆಯುತ್ತದೆ ಎನ್ನುತ್ತಾರೆ ಗ್ರಾಮಾಂತರದ ನಾಗರಿಕರು.
ಉಡುಪಿ ಜಿಲ್ಲೆಯ ಬೈಂದೂರು, ಕುಂದಾ ಪುರ, ಬ್ರಹ್ಮಾವರ, ಹೆಬ್ರಿ ಮತ್ತು ಕಾರ್ಕಳ ತಾಲೂಕಿನ ಗ್ರಾಮೀಣ ಭಾಗದಲ್ಲೂ ವಿದ್ಯುತ್ ವ್ಯತ್ಯಯ ವಿರುತ್ತದೆ. ಈ ವರ್ಷ ಮಳೆಗಾಲ ಆರಂಭವಾಗುವ ಮೊದಲೇ ಕಾಪು, ಶಿರ್ವ ಭಾಗದಲ್ಲಿ ವಿದ್ಯುತ್ ಸಮಸ್ಯೆ ಯಾಗುತ್ತಿತ್ತು. ಇಂದಿಗೂ ಅದು ಬಗೆಹರಿದಿಲ್ಲ. ಇದು ಲೋಡ್‌ಶೆಡ್ಡಿಂಗ್ ಅಲ್ಲ ವಂತೆ. ತಂತಿ ತುಂಡಾಗುವುದು, ಕಂಬ ಬೀಳುವುದು, ಟ್ರಾನ್ಸ್ ಫಾರ್ಮರ್ ಕಟ್ ಆಗುವುದರಿಂದ ಹೀಗಾಗು ತ್ತಿದೆ ಎನ್ನುತ್ತಾರೆ ಮೆಸ್ಕಾಂನವರು.
-ಮಳೆಯ ಆರಂಭಕ್ಕೂ ಮೊದಲೇ ದುರ್ಬಲ ಕಂಬ ಹಾಗೂ ತಂತಿ ಮತ್ತು ನಿರ್ದಿಷ್ಟ ಅವಧಿ ಮೀರಿದ ಟ್ರಾನ್ಸ್‌ಫಾರ್ಮರ್‌ಗಳನ್ನು ಗುರುತಿಸಿ ನಗರದಲ್ಲಿ ವಹಿಸುವ ಮುತುವರ್ಜಿಯಂತೆ ಗ್ರಾಮೀಣ ಪ್ರದೇಶದಲ್ಲೂ ಬದಲಾಯಿಸಬೇಕು.
-ಗ್ರಾಮೀಣ ಭಾಗದಲ್ಲಿ ಸಮಸ್ಯೆ ಹೆಚ್ಚಿರುವುದರಿಂದ ಹೆಚ್ಚಿನ ಲಕ್ಷ್ಯ, ಪೂರ್ವಸಿದ್ಧತೆ ಕೈಗೊಳ್ಳಬೇಕು. ಮಳೆಗಾಲಕ್ಕಿಂತ ಮೊದಲೇ ಅಪಾಯಕಾರಿ ಮರ, ಮರದ ರೆಂಬೆಗಳನ್ನು ತೆರವುಗೊಳಿಸಬೇಕು.
– ಅರಣ್ಯ ಇಲಾಖೆಯ ಅನುಮತಿ ಸಿಕ್ಕಿಲ್ಲ, ಖಾಸಗಿ ಜಮೀನಿನಲ್ಲಿ ಮರವಿದೆ ಎಂಬಿತ್ಯಾದಿ ಕಾರಣಕ್ಕೆ ನಿರ್ಲಕ್ಷ್ಯ ವಹಿಸಬಾರದು.
-ಕೆಲವೊಮ್ಮೆ ತುಂಡಾಗಿ ಬಿದ್ದ ತಂತಿಯನ್ನೇ ಸರಿಪಡಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತದೆ. ಇದೂ ಸಮಸ್ಯೆ ಮರುಕಳಿಸಲು ಕಾರಣ. ಇದನ್ನು ಕೈಗೊಳ್ಳಬಾರದು.
ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲಿ ಅನಿಯಮಿತ ವಿದ್ಯುತ್ ಕಡಿತ:
ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲಿ ಅಧಿಕ. ಒಮ್ಮೆ ವಿದ್ಯುತ್ ಹೋದರೆ ಮತ್ತೆ ಯಾವಾಗ ಬಂದೀತೆಂದು ಹೇಳಲಾಗದು. ಶನಿವಾರ ಬೆಳಗ್ಗೆ ಹೋದ ವಿದ್ಯುತ್ ಬಂದದ್ದು ರಾತ್ರಿ 10ರ ಸುಮಾರಿಗೆ. ಸುಳ್ಯ ನಗರದಲ್ಲೂ ಇದೇ ಪರಿಸ್ಥಿತಿ. ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚು ಕಾಡುತ್ತಿದ್ದರೂ ಬೇಸಗೆ ಕಾಲದಲ್ಲೇನೂ ಭಿನ್ನವಾಗಿರದು. ಆಗಲೂ ಇದೇ ಕಾಯುವ ಪರಿಸ್ಥಿತಿ. ವಾರದಿಂದೀಚೆಗೆ ದಿನವೂ ಹಗಲಿನಲ್ಲಿ ಸುಮಾರು 10ಕ್ಕೂ ಅಧಿಕ ಬಾರಿ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಿದೆ. ಕೆಲವೊಮ್ಮೆ ರಾತ್ರಿಯೂ ವಿದ್ಯುತ್ ಇಲ್ಲದೆ ಮಳೆಯ ಆತಂಕದ ಸಂದರ್ಭದಲ್ಲಿ ಕತ್ತಲಲ್ಲಿ ಕಳೆಯುವಂತಾಗಿದೆ.