dtvkannada

ಕುಂದಾಪುರ: ಶಿರೂರು ಟೋಲ್‌ ಪ್ಲಾಜಾದ ಕಂಬಕ್ಕೆ ಆ್ಯಂಬುಲೆನ್ಸ್‌ ಢಿಕ್ಕಿಯಾಗಿ ನಾಲ್ವರು ಮೃತಪಟ್ಟ ಅವಘಢದಲ್ಲಿ ಗಾಯಗೊಂಡ ಐವರ ಪೈಕಿ ಚಾಲಕ ರೋಶನ್‌ ರೋಡ್ರಿಗಸ್‌ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಬಾಕಿ ನಾಲ್ವರು ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿ ಆ್ಯಂಬುಲೆನ್ಸ್‌ ಚಾಲಕನ ವಿರುದ್ಧ ಕೇಸು ದಾಖಲಾಗಿದೆ.

ಹೊನ್ನಾವರದಿಂದ ರೋಗಿ ಯೊಬ್ಬರನ್ನು ಬುಧವಾರ ಸಂಜೆ ತುರ್ತು ಚಿಕಿತ್ಸೆಗೆಂದು ಉಡುಪಿಗೆ ಕರೆತರುತ್ತಿದ್ದಾಗ ಶಿರೂರಿನ ಟೋಲ್‌ಗೇಟಿನ ಕಂಬಕ್ಕೆ ಢಿಕ್ಕಿ ಹೊಡೆದು ಆ್ಯಂಬುಲೆನ್ಸ್‌ ಪಲ್ಟಿಯಾಗಿ, ಅದರೊಳಗಿದ್ದವರು ರಸ್ತೆಗೆ ಎಸೆಯಲ್ಪಟ್ಟು, ರೋಗಿ ಸಹಿತ ನಾಲ್ವರು ಸಾವನ್ನಪ್ಪಿದ್ದರು. ಮೃತಪಟ್ಟವರೆಲ್ಲರೂ ಹೊನ್ನಾವರ ನಿವಾಸಿಗಳಾಗಿದ್ದರು.

ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಗೀತಾ, ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಗಣೇಶ್‌, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶಶಾಂಕ್‌, ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಟೋಲ್‌ ಸಿಬಂದಿ ಸಂಬಾಜೆ ಘೋರ್ಪಡೆ ಚೇತರಿಸಿಕೊಳ್ಳುತ್ತಿದ್ದಾರೆ.

ಚಾಲಕನ ಮೇಲೆ ಕೇಸು :
ಅಪಘಾತಕ್ಕೆ ಸಂಬಂಧಿಸಿದಂತೆ ಟೋಲ್‌ ಸಿಬಂದಿ ದೀಪಕ್‌ ಶೆಟ್ಟಿ ಎನ್ನುವವರು ನೀಡಿದ ದೂರಿನಂತೆ ಆ್ಯಂಬುಲೆನ್ಸ್‌ ಚಾಲಕ ರೋಶನ್‌ ರೋಡ್ರಿಗಸ್‌ ವಿರುದ್ಧ ಕೇಸು ದಾಖಲಾಗಿದೆ. ಚಾಲಕನ ವೇಗದ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಅವಘಢ ಸಂಭವಿಸಿದ್ದು, ಅದರಂತೆ ಬೈಂದೂರು ಠಾಣೆಯಲ್ಲಿ ಸೆಕ್ಷನ್‌ 279, 338, 304 ರಡಿ ಪ್ರಕರಣ ದಾಖಲಾಗಿದೆ.

ಟೋಲ್‌ ಸಿಬಂದಿ ನಿರ್ಲಕ್ಷ್ಯವೂ ಕಾರಣವಾಯಿತೇ?:
ನಾಲ್ವರ ಸಾವಿಗೆ ಕಾರಣವಾದ ಆ್ಯಂಬುಲೆನ್ಸ್‌ ದುರಂತಕ್ಕೆ ಮೇಲ್ನೋಟಕ್ಕೆ ಚಾಲಕನ ವೇಗದ ಚಾಲನೆ ಕಾರಣ ಎನ್ನಲಾಗಿದ್ದರೂ, ಟೋಲ್‌ಗೇಟ್‌ನ ಸಿಬಂದಿಯ ನಿರ್ಲಕ್ಷ್ಯವೂ ಕಾರಣವಾಯಿತೇ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಟೋಲ್‌ಗೇಟ್‌ನ ತುರ್ತು ನಿರ್ಗಮನ (ಆ್ಯಂಬುಲೆನ್ಸ್‌, ಗಣ್ಯರ ವಾಹನ ತೆರಳಲು ಇರುವ ಗೇಟು) ಗೇಟಿನ ಟ್ರ್ಯಾಕ್‌ನಲ್ಲಿ ದನವೊಂದು ಮಲಗಿತ್ತು. ಇದಲ್ಲದೆ ತುರ್ತು ನಿರ್ಗಮನ ಗೇಟ್‌ನಲ್ಲಿ ಎರಡೆರಡು ಕಡೆಗಳಲ್ಲಿ ಬ್ಯಾರಿಕೇಡ್‌ ಇಟ್ಟಿರುವುದು ಯಾಕೆ? ಸುಮಾರು 500 ಮೀ. ದೂರದವರೆಗೆ ಆ್ಯಂಬುಲೆನ್ಸ್‌ ಸೈರನ್‌ ಶಬ್ದ ಕೇಳುವುದು ಸಾಮಾನ್ಯವಾಗಿದ್ದರೂ, ಆ್ಯಂಬುಲೆನ್ಸ್‌ ಅಷ್ಟೊಂದು ಹತ್ತಿರ ಬರುವವರೆಗೆ ಕಾದದ್ದು ಯಾಕೆ? ಎನ್ನುವ ಪ್ರಶ್ನೆಗಳೆಲ್ಲ ಸಾರ್ವಜನಿಕರು ಕೇಳುತ್ತಿದ್ದಾರೆ.

ಎಬಿಎಸ್‌ ಬ್ರೇಕ್‌ ಇರಲಿಲ್ಲವೇ?:
ಚಾಲಕ ಬ್ರೇಕ್‌ ಹಾಕಿದ್ದ ನಿಯಂತ್ರಣಕ್ಕೆ ಸಿಗದ ಕಾರಣ ಹ್ಯಾಂಡ್‌ ಬ್ರೇಕ್‌ ಹಾಕಿದ್ದ. ಕಾಂಕ್ರೀಟ್‌ ರಸ್ತೆಯಲ್ಲಿ ನೀರು ನಿಂತ ಕಾರಣ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. 3 ವರ್ಷ ಹಿಂದಿನ ಟಾಟಾ ವಿಂಗರ್‌ ಆ್ಯಂಬುಲೆನ್ಸ್‌ ಇದಾಗಿದ್ದು, ಎಬಿಎಸ್‌ ಬ್ರೇಕ್‌ ಇರಬೇಕು. ಬಿಎಎಸ್‌ -4 ವಾಹನಗಳಲ್ಲಿ ಎಬಿಎಸ್‌ ಬ್ರೇಕ್‌ ಇರುತ್ತದೆ. ಅದು ವಾಹನವನ್ನು ನಿಯಂತ್ರಣಕ್ಕೆ ತರುತ್ತದೆ. ಆದರೆ ಇಲ್ಲಿ ಆ್ಯಂಬುಲೆನ್ಸ್‌ ವಾಹನ ಬ್ರೇಕ್‌ ಒತ್ತಿದಾಗ ನಿಲ್ಲದೆ, ಪಲ್ಟಿಯಾಗಿದೆ. ಹಾಗಾಗಿ ಎಬಿಎಸ್‌ ಬ್ರೇಕ್‌ ಇರಲಿಲ್ಲವೇ? ಎನ್ನುವ ಪ್ರಶ್ನೆ ಉದ್ಭವಿಸಿದೆ.

ನಡೆದದ್ದೇನು?
ಹಡಿನಬಾಳ ಗ್ರಾಮದ ಹಾಡಗೆರೆ ಮನೆಯವರಾದ ಲೋಕೇಶ್‌ ಮಾದೇವ ನಾಯ್ಕ ಕೂಲಿ ಮಾಡಿ ಬದುಕುವ ಬಡ ಕುಟುಂಬದವರಾಗಿದ್ದಾರೆ. ಬುಧವಾರ ಅಪರಾಹ್ನದ ವೇಳೆಗೆ ಅವರು ರಕ್ತದೊತ್ತಡ (ಬಿಪಿ) ಕಡಿಮೆಯಾಗಿ ಅಸ್ವಸ್ಥರಾದರು. ತತ್‌ಕ್ಷಣ ಪತ್ನಿ, ಸಂಬಂಧಿಗಳಾದ ಕವಲಕ್ಕಿಯಲ್ಲಿ ಗೋಬಿ ಅಂಗಡಿ ನಡೆಸುತ್ತಿರುವ ಮಂಜುನಾಥ ನಾಯ್ಕ (ಗೋಬಿ ಮಂಜು) ಮತ್ತು ಗಜಾನನ ಅವರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ ಮೂಲಕ ಉಡುಪಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯಲ್ಲಿ ಅಪಘಾತ ಸಂಭವಿಸಿತು.

ಆ್ಯಂಬುಲೆನ್ಸ್‌ನಲ್ಲಿದ್ದ ಗಜಾನನ ಲಕ್ಷ್ಮಣ ನಾಯ್ಕ (36), ಜ್ಯೋತಿ ಲೋಕೇಶ್‌ ನಾಯ್ಕ (32), ಲೋಕೇಶ್‌ ಮಾಧವ ನಾಯ್ಕ (38) ಹಾಗೂ ಮಂಜುನಾಥ ನಾಯ್ಕ (42) ಮೃತಪಟ್ಟವರು. ಹೊನ್ನಾವರ ಸಮೀಪದ ಹಡಿನಬಾಳ ನಿವಾಸಿಗಳಾಗಿರುವ ಅವರು ಹೊನ್ನಾವರದ ಖಾಸಗಿ ಆಸ್ಪತ್ರೆಯಿಂದ ಉಡುಪಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಿದ್ದರು.

ಟೋಲ್‌ ಸಿಬ್ಬಂದಿ ಸಂಬಾಜೆ ಗೋರ್ಪಡೆ (41) ಶಶಾಂಕ್‌, ಗೀತಾ, ಗಣೇಶ, ರೋಶನ್‌ ರಾಡ್ರಿಗಸ್‌ ಗಂಭೀರ ಗಾಯಗೊಂಡಿದ್ದಾರೆ. ಢಿಕ್ಕಿ ಹೊಡೆದ ರಭಸಕ್ಕೆ ಆ್ಯಂಬುಲೆನ್ಸ್‌ನಲ್ಲಿದ್ದವರು ರಸ್ತೆಗೆ ಎಸೆಯಲ್ಪಟ್ಟಿದ್ದರು. ಚಾಲಕ ವಾಹನದಡಿಯಲ್ಲಿ ಸಿಲುಕಿದ್ದ.

ಅಪಘಾತಕ್ಕೆ ಕಾರಣ: ಶಿರೂರು ಟೋಲ್‌ಗೇಟ್‌ನಲ್ಲಿ ಆ್ಯಂಬುಲೆನ್ಸ್‌ ಸಂಚಾರಕ್ಕೆ ಪ್ರತ್ಯೇಕ ಮಾರ್ಗ ಇದ್ದು, ಸೈರನ್‌ ಕೇಳಿದ ತಕ್ಷಣ ಆ ಮಾರ್ಗದ ಬ್ಯಾರಿಕೇಡ್‌ಗಳನ್ನು ತೆಗೆದು ಟೋಲ್‌ ಮುಕ್ತ ಮಾಡಿ ದಾರಿ ಬಿಡಲಾಗುತ್ತದೆ. ಬುಧವಾರ ಸಂಜೆ ಕೂಡ ಆ್ಯಂಬುಲೆನ್ಸ್‌ ವೇಗವಾಗಿ ಬಂದಿದೆ. ಆಗ ಸಣ್ಣದಾಗಿ ಮಳೆ ಸುರಿಯುತ್ತಿತ್ತು. ಗೇಟ್‌ ಸಿಬ್ಬಂದಿ ತರಾತುರಿಯಲ್ಲಿ ಬ್ಯಾರಿಕೇಡ್‌ ತೆರವು ಮಾಡಿದರು. ಇದೇ ವೇಳೆಗೆ ಎದುರುಗಡೆ ಮಲಗಿದ್ದ ದನವೊಂದನ್ನು ಕಂಡು ಚಾಲಕ ಗೊಂದಲದಿಂದ ಬ್ರೇಕ್‌ ಹಾಕುವಂತಾಯಿತು. ಕಾಂಕ್ರೀಟ್‌ ರಸ್ತೆಯಾಗಿರುವ ಕಾರಣ ಆ್ಯಂಬುಲೆನ್ಸ್‌ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಯಿತು.

By dtv

Leave a Reply

Your email address will not be published. Required fields are marked *

error: Content is protected !!