ಸುಳ್ಯ: ಬೆಳ್ಳಾರೆಯಲ್ಲಿ ನಡೆದ ಅಮಾಯಕ ಮುಹಮ್ಮದ್ ಮಸೂದ್ ಎಂಬಾತನ ಹತ್ಯೆಗೆ ಬಜರಂಗ ದಳದ ದುಷ್ಕರ್ಮಿಗಳ ಕುರಿತಾದ ಜಿಲ್ಲಾ ಪೊಲೀಸ್ ಇಲಾಖೆಯ ಮೃದು ಧೋರಣೆಯೇ ಕಾರಣವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಹೇಳಿದ್ದಾರೆ.
ಮುಹಮ್ಮದ್ ಮಸೂದ್ ಒಂದು ತಿಂಗಳ ಹಿಂದಷ್ಟೇ ಸುಳ್ಯದ ಕಾರಿಂಜಕ್ಕೆ ಬಂದು ಕೂಲಿ ಕೆಲಸ ಮಾಡಿಕೊಂಡು ತನ್ನ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದ. ಹತ್ಯೆ ಘಟನೆಯ ದಿನ ಮಸೂದ್ ಮತ್ತು ಬಜರಂಗ ದಳದ ಸುಧೀರ್ ಎಂಬಾತನ ನಡುವೆ ಮಾತಿನ ಜಗಳ ನಡೆದಿತ್ತು. ನಂತರ ಸುಧೀರ್, ಮಸೂದ್ ನನ್ನು ಮಾತುಕತೆಗೆಂದು ಕರೆಸಿ ಬಜರಂಗ ದಳದ ಇತರ 8 ಮಂದಿ ದುಷ್ಕರ್ಮಿಗಳನ್ನು ಸೇರಿಸಿಕೊಂಡು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಸ್ವತಃ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಮಸೂದ್ ಪ್ರಾಣ ಕಳೆದುಕೊಂಡಿದ್ದಾನೆ. ಮುಸ್ಲಿಮರ ವಿರುದ್ಧ ಸಂಘಪರಿವಾರ ದುಷ್ಕರ್ಮಿಗಳು ಯಾವುದೇ ದುಷ್ಕೃತ್ಯ ನಡೆಸಿದರೂ ಜಿಲ್ಲೆಯ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ತ್ರಿಶೂಲ ದೀಕ್ಷೆ ನಡೆಸಿದಾಗ, ಸಂಘಪರಿವಾರದ ನಾಯಕರು ಮುಸ್ಲಿಮರ ವಿರುದ್ಧ ದ್ವೇಷಕಾರಿ ಭಾಷಣ ಮಾಡಿದಾಗ, ಮುಸ್ಲಿಮರ ವ್ಯಾಪಾರಕ್ಕೆ ಬಹಿಷ್ಕಾರ ಒಡ್ಡಿದಾಗ, ಮುಸ್ಲಿಮರನ್ನು ಗುರಿಪಡಿಸಿಕೊಂಡು ನಿರಂತರ ದಾಳಿ ನಡೆಸಿದಾಗ ಪೊಲೀಸ್ ಇಲಾಖೆ ಮೃದು ಧೋರಣೆ ತಾಳುತ್ತಾ ಬಂತು. ಈ ರೀತಿ ನೈತಿಕ ಬೆಂಬಲ ದೊರಕಿದ ಕಾರಣದಿಂದಲೇ ಇಂದು ಮಸೂದ್ ಹತ್ಯೆ ನಡೆದಿದೆ. ಪೊಲೀಸರು ಸಂಘಪರಿವಾರದ ದುಷ್ಕರ್ಮಿಗಳ ವಿರುದ್ಧ ಸಕಾಲಿಕ ಹಾಗೂ ಕಠಿಣ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರೆ ಇಂದು ಕ್ಷುಲ್ಲಕ ಕಾರಣಕ್ಕಾಗಿ ಮಸೂದ್ ಹತ್ಯೆ ನಡೆಯುತ್ತಿರಲಿಲ್ಲ.
ಜಿಲ್ಲಾ ಪೊಲೀಸ್ ಇಲಾಖೆ ಈ ಹತ್ಯೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಹತ್ಯೆಕೋರರು ಯಾವುದೇ ಕಾರಣಕ್ಕೂ ಕಾನೂನಿನ ಕುಣಿಕೆಯಿಂದ ಪಾರಾಗದಂತೆ ನೋಡಿಕೊಳ್ಳಬೇಕು. ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಿ ಜಿಲ್ಲೆಯನ್ನು ಸಂಘಪರಿವಾರದ ಭಯೋತ್ಪಾದನೆಯಿಂದ ಮುಕ್ತಗೊಳಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಕೂಡಲೇ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕೆಂದು ಇಜಾಝ್ ಅಹ್ಮದ್ ಸರಕಾರವನ್ನು ಆಗ್ರಹಿಸಿದ್ದಾರೆ.