ಮಂಗಳೂರು :ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜುಲೈ 19 ರಂದು ಹಿಂದೂ ಸಂಘಟನೆಯ 8 ಮಂದಿ ದುಷ್ಕರ್ಮಿಗಳ ತಂಡದಿಂದ ತೀವ್ರ ಹಲ್ಲೆಗೊಳಗಾಗಿ ಮರಣವನ್ನಪ್ಪಿದ ಯುವಕ ಮಸೂದ್ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ ಒದಗಿಸುವ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ಜುಲೈ 19ರಂದು ಹಲ್ಲೆಗೊಳಗಾಗಿದ್ದ ಮಸೂದ್‌ನನ್ನು ಮಂಗಳೂರಿನ ಪಡೀಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಸಂಜೆ ವೇಳೆ ಮಸೂದ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಈ ಸುದ್ದಿ ತಿಳಿದ ಸಮುದಾಯದ ಮುಖಂಡರು ಹಾಗೂ ಕುಟುಂಬಿಕರು ಸ್ನೇಹಿತರು ಮಸೂದ್ ಕುಟುಂಬಕ್ಕೆ ರಾಜ್ಯ ಸರಕಾರದಿಂದ ಪರಿಹಾರ ಘೋಷಿಸುವಂತೆ ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಸ್ಥಳಕ್ಕೆ ಖುದ್ದು ಜಿಲ್ಲಾಧಿಕಾರಿ ಬಂದು ಭರವಸೆ ಭೇಟಿ ನೀಡಿದ್ದು ತಮ್ಮ ಈಡೇರಿಕೆಗೆ ನೆರೆದಿದ್ದವರು ಪ್ರತಿಭಟನೆ ನಡೆಸಿದರು. ಈ ಮಧ್ಯೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ವಿಫಲ ಯತ್ನ ನಡೆಸಿದರು.

ನಂತರ ಸ್ಥಳಕ್ಕೆ ಬಂದ ಉಳ್ಳಾಲ ಶಾಸಕ ಯು.ಟಿ ಖಾದರ್ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದರು.
ಈ ವೇಳೆ ಮಸೂದ್ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತ ಭರಿಸುವ ಆಶ್ವಾಸನೆ ಹಾಗೂ ಮಸೂದ್ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡುವ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ನಂತರ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ರಾತ್ರಿ 11:30ಕ್ಕೆ ಮರಣೋತ್ತರ ಪರೀಕ್ಷೆ ಬಳಿಕ ಬೆಳ್ಳಾರೆಗೆ ಮೃತದೇಹ ಕೊಂಡೊಯ್ದು ಮಧ್ಯರಾತ್ರಿ 2 ಗಂಟೆಗೆ ಝಕಾರಿಯಾ ಜುಮಾ ಮಸೀದಿಯ ಖಬರಸ್ಥಾನದಲ್ಲಿ ಅಂತಿಮ ವಿಧಿವಿಧಾನದೊಂದಿಗೆ ದಫನಕಾರ್ಯ ನಡೆಸಿದರು. ಈ ವೇಳೆ ಸ್ಥಳದಲ್ಲಿ ಸಾವಿರಾರು ಮಂದಿ ಸೇರಿದ್ದು ಸಾರ್ವಜನಿಕರೆಲ್ಲರು ಕಣ್ಣಿರಿನೊಂದಿಗೆ ಯುವಕನನ್ನು ಬಿಳ್ಕೊಟ್ಟರು.