ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ಸು ಕಂಡ ತೆಲುಗಿನ “ಪುಷ್ಪಾ’ ಸಿನಿಮಾದಿಂದ ಪ್ರೇರಣೆಯಿಂದ ಬುಲೆರೊ ಗೂಡ್ಸ್ ವಾಹನದ ಕೆಳಭಾಗದಲ್ಲಿ ಪ್ರತ್ಯೇಕ ಬಾಕ್ಸ್ ಮಾಡಿಕೊಂಡು ಬೀದರ್‌ನಿಂದ ಗಾಂಜಾ ತಂದು ನಗರದಲ್ಲಿ ಪೆಡ್ಲರ್‌ಗಳಿಗೆ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಬೇಗೂರು ಪೊಲೀಸರು ಬೇಧಿಸಿದ್ದು, ಒಂದು ಕೋಟಿ ಮೌಲ್ಯದ 175 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕುಣಿಗಲ್ ತಾಲೂಕಿನ ಕೆ.ಆರ್.ಅರವಿಂದ್(26), ತಾವರೆಕೆರೆ ನಿವಾಸಿ ಪವನ್ ಕುಮಾರ್ (27), ಮಂಗಳೂರಿನ ಅಮ್ಜದ್ ಇತಿ ಯಾರ್ ಅಲಿಯಾಸ್ ಇಮ್ರಾನ್ ಅಲಿಯಾಸ್ ಇರ್ಷಾದ್ (27) ಈ ಆರೋಪಿಗಳ ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಬೀದರ್‌ನ ಭಾಲ್ಕಿ ಪ್ರಭು(27), ದಕ್ಷಿಣ ಕನ್ನಡದ ನಜೀಮ್ (26) ಮತ್ತು ಆಂಧ್ರಪ್ರದೇಶದ ಭೂಪಾಲ ಪಟ್ಟಣಂನ ಪತ್ತಿ ಸಾಯಿ ಚಂದ್ರ ಪ್ರಕಾಶ್ (19) ಬಂಧಿತರು.
ಏಳು ಮಂದಿ ಆರೋಪಿಗಳ ವಿರುದ್ಧ ಆಂಧ್ರಪ್ರದೇಶ, ಬೆಂಗಳೂರು ನಗರ, ಗ್ರಾಮಾಂತರದ ವಿವಿಧ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ, ಎನ್‌ಡಿಪಿಎಸ್ ಹಾಗೂ ದರೋಡೆ ಸೇರಿ ಹಲವು ಅಪರಾಧ ಪ್ರಕರಣಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳು ಜೈಲಿಗೆ ಹೋದಾಗ ಪರಸ್ಪರ ಪರಿಚಯವಾಗಿ, ದೊಡ್ಡ ಮಟ್ಟದಲ್ಲಿ ಮಾದಕ ವಸ್ತು ಮಾರಾಟ ಜಾಲ ವಿಸ್ತರಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಅರವಿಂದ್, ಪವನ್, ಅಮ್ಜದ್ ಜು. 15ರಂದು ದೇವರಚಿಕ್ಕನಹಳ್ಳಿಯ ಆರ್‌ಟಿಒ ಕಚೇರಿಯ ಹುಣ ಸೇಮರದ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ತಿಳಿದ ಪೊಲೀಸರು ತಂಡ ರಚಿಸಿ ಮಾಲು ಸಮೇತ ಆರೋಪಿಗಳ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಅದರಂತೆ ಕ್ಷೀಪ್ರಕಾರ್ಯಾಚರಣೆ ನಡೆಸಿದ ತಂಡ ಮೂವರು ಆರೋಪಿಗಳನ್ನು ಬಂಧಿಸಿ 6 ಕೆ.ಜಿ. 380 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿತ್ತು. ಬಳಿಕ ಮೂವರ ವಿಚಾರಣೆಯಲ್ಲಿ ಇತರೆ ಮೂವರು ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿತ್ತು ಎಂದು ಪೊಲೀಸರು ಹೇಳಿದರು.
ಗಾಂಜಾ ಬಾಕ್ಸ್ ಸೃಷ್ಟಿಗೆ ಸಿನಿಮಾ ದೃಶ್ಯಗಳೇ ಪ್ರೇರಣೆ:
ಅಮ್ಜದ್ ಇತಿಯಾರ್ ವಿಚಾರಣೆಯಲ್ಲಿ ಬೀದರ್‌ನ ಪ್ರಭು ಗಾಂಜಾ ಪೂರೈಕೆ ಮಾಡುತ್ತಿರುವ ವಿಚಾರ ಬಾಯಿಬಿಟ್ಟಿದ್ದ. ಅಲ್ಲದೆ, ಪ್ರತಿ ಬುಧವಾರ ಎಲೆಕ್ಟ್ರಾನಿಕ್ ಸಿಟಿ, ಹುಳಿಮಾವು, ಬೇಗೂರು ವ್ಯಾಪ್ತಿಯ ನಿರ್ಜನಪ್ರದೇಶದಲ್ಲಿ ಗಾಂಜಾ ಪೂರೈಕೆ ಮಾಡಿ ಹೋಗುತ್ತಾನೆ ಎಂಬುದನ್ನೂ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ಎ.ಬಿ.ಸುಧಾಕರ್ ನೇತೃತ್ವದಲ್ಲಿ ಪಿಐ ಅನಿಲ್ ಕುಮಾರ್ ತಂಡ ಜು. 20ರಂದು ಅಮ್ಜದ್ ಇತಿಯಾರ್ ಜತೆ ಬೋಳಗುಟ್ಟ ರಸ್ತೆಯ ನೈಸ್ ರಸ್ತೆಯ ಸೇತುವೆ ಬಳಿಯ ಖಾಲಿ ಜಾಗದಲ್ಲಿ ಆರೋಪಿಗಳಿಗಾಗಿ ಕಾಯುತ್ತಿದ್ದರು. ಅದೇ ವೇಳೆ ಬುಲೆರೊ ಗೂಡ್ಸ್ ವಾಹನದಲ್ಲಿ ಪ್ರಭು ಹಾಗೂ ಇತರೆ ಮೂವರು ಬಂದಿದ್ದರು. ಆರೋಪಿಗಳನ್ನು ಮಾಲು ಸಮೇತ ಸೆರೆ ಹಿಡಿದು ವಿಚಾರಣೆ ನಡೆಸಲಾಗಿತ್ತು. ಆಗ ವಾಹನ ಪರಿಶೀಲಿಸಿದಾಗ ಗೂಡ್ಸ್ ವಾಹನದ ಲಗೇಜ್ ಇಡುವ ಪ್ಲಾಟ್‌ಫಾರಂ ಕೆಳಭಾಗದಲ್ಲಿ ದೊಡ್ಡ ಬಾಕ್ಸ್ ಮಾಡಿಕೊಂಡು ಅದರಲ್ಲಿ 168 ಕೆ.ಜಿ. 630 ಗ್ರಾಂ ಗಾಂಜಾ ಇಟ್ಟಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಪ್ರಭು ಮತ್ತು ಪತ್ತಿ ಸಾಯಿ ಚಂದ್ರಪ್ರಕಾಶ್ ವಿಚಾರಣೆಯಲ್ಲಿ ತೆಲುಗಿನ ಪುಷ್ಪಾ ಸಿನಿಮಾದ ಪ್ರೇರಣೆಯಿಂದ ಗೂಡ್ಸ್ ವಾಹನಕ್ಕೆ ಪ್ರತ್ಯೇಕ ಬಾಕ್ಸ್ ಮಾಡಿಕೊಂಡು ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದರು.