ಮಂಗಳೂರು: ಮಂಗಳೂರು ನಗರದಲ್ಲಿ ನಡೆದ ಹತ್ಯೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ಫೋಸ್ಟ್ ಹಾಕಿದವರ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ 5 ಪ್ರಕರಣ ದಾಖಲಿಸಲಾಗಿದೆ.
ಮಂಗಳೂರು ನಗರದಲ್ಲಿ ನಡೆದ ಹತ್ಯೆಗೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಗೂ ಕಾಮೆಂಟ್ ಗಳು ವೈರಲ್ ಆಗುತ್ತಿವೆ. ಇಂತಹ ಪೋಸ್ಟ್ ಗಳು ಗಲಭೆಗೆ ಪ್ರಚೋದನೆ ನೀಡುತ್ತಿರುವುದರಿಂದ ಈ ಸಂಬಂಧ ಸೆನ್ ಪೊಲೀಸರು 5 ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾವೆಲ್ಲಾ ಪೋಸ್ಟ್ ವಿರುದ್ಧ ಕೇಸ್ 😕
ಕೆಲ ದಿನಗಳ ಹಿಂದೆ ಕರಾವಳಿಯಲ್ಲಿ ನಡೆದ ಹತ್ಯೆಯ ವೇಳೆ ಸಾಮಾಜಿಕ ಜಾಲತಾಣದಲ್ಲಿ ಕರಾವಳಿಯಲ್ಲಿ ದೊಡ್ಡಮಟ್ಟದ ಕೋಮು ಸಂಘರ್ಷ ಸ್ಪೋಟಗೊಳ್ಳುವ ಸಾಧ್ಯತೆಯಿದೆ. ಇದು ರಾಜ್ಯ ಗುಪ್ತದಳದ ಮಾಹಿತಿ ಎನ್ನುವ ಪೋಸ್ಟ್ ವೊಂದು ಫಾರ್ವಡ್ ಆಗಿ ವೈರಲ್ ಆಗಿತ್ತು.
ಪ್ರವೀಣ್ ಕೊಲೆಗೆ ಪ್ರತೀಕರಾರವಾಗಿ ಕೊಲೆ ಮಾಡಲು ಕರೆ ನೀಡಿರುವ ಪೋಸ್ಟ್ ಹಾಗೂ ಸುರತ್ಕಲ್ ನಡೆದ ಫಾಜಿಲ್ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡುವುದಾಗಿ ಫೇಸ್ ಬುಕ್, ವಾಟ್ಸಾಪ್ ಗ್ರೂಪ್ ಗಳಲ್ಲಿ ಪೋಸ್ಟ್ ಹಾಕಿ ಚರ್ಚೆ ನಡೆಸಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣದ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದ್ದು, ಆಕ್ಷೇಪಣಾ ಪೋಸ್ಟ್ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.