ವಿಟ್ಲ: ಗುಡ್ಡವೊಂದರಲ್ಲಿ ತಲೆ ಬುರುಡೆ, ಎಲುಬು ಹಾಗೂ ಬಟ್ಟೆ ಪತ್ತೆಯಾದ ಸ್ಥಳ ನೆಕ್ಕೆರಕಾಡು ಎಂಬಲ್ಲಿ ಕಂಡು ಬಂದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣಾ ಪೊಲೀಸರು ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ.

ಮೃತಪಟ್ಟ ವ್ಯಕ್ತಿಯನ್ನು ಉಕ್ಕುಡ ಕಾಂತಡ್ಕ ನಿವಾಸಿ ನಾಗೇಶ್ ಗೌಡ(65) ಎಂದು ತಿಳಿದು ಬಂದಿದೆ.
ನಾಗೇಶ್ ಗೌಡ ರವರು 6 ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿನ್ನೆ ಸಾಯಂಕಾಲ ಗುಡ್ಡಕ್ಕೆ ಸೊಪ್ಪು ತರಲೆಂದು ತೆರಳಿದ ಮಂದಿಗೆ ತಲೆಬುರುಡೆ, ಎಲುಬು ಹಾಗೂ ಆ ವ್ಯಕ್ತಿ ಧರಿಸಿರುವುದಾಗಿ ಸಂಶಯಿಸಲ್ಪಟ್ಟ ಬಟ್ಟೆ ಕಾಣಸಿಕ್ಕಿದೆ.

ಬಳಿಕ ಅವರು ಮರಳಿಬಂದು ಮನೆಮಂದಿಗೆ ವಿಚಾರ ತಿಳಿಸಿದ್ದಾರೆ. ರಾತ್ರಿ ವೇಳೆ ಅವರು ಈ ವಿಚಾರವನ್ನು ವಿಟ್ಲ ಠಾಣಾ ಪೊಲೀಸರಿಗೆ ತಿಳಿಸಿದ್ದರು.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿ ನಾಪತ್ತೆ ಪ್ರಕರಣಗಳ ಜಾಡು ಹಿಡಿದು ತನಿಖೆ ನಡೆಸಿದ್ದು, ಈ ವೇಳೆ ನಾಪತ್ತೆಯಾದ ನಾಗೇಶ್ ರವರ ಮಗನನ್ನು ಸ್ಥಳಕ್ಕೆ ಕರೆಸಿದ್ದರು.

ಈ ವೇಳೆ ಅವರು ನಾಪತ್ತೆಯಾಗುವ ದಿನ ಅವರು ಧರಿಸಿದ್ದ ಬಟ್ಟೆ ಹಾಗೂ ತಲೆಬುರುಡೆ ಸಮೀಪ ಪತ್ತೆಯಾಗಿದ್ದ ಬಟ್ಟೆಯ ಆಧಾರದಲ್ಲಿ ಅದು ನಾಗೇಶ್ ಗೌಡರದ್ದೆ ಎಂದು ಅವರ ಮಗ ಗುರುತು ಪತ್ತೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗೇಶ್ ಗೌಡ ರವರು ನೆಕ್ಕರೆ ಕಾಡು ರಸ್ತೆಯಾಗಿ ಮನೆಯೊಂದಕ್ಕೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿ ಮೃತಪಟ್ಟಿರಬೇಕೆಂದು ಅಂದಾಜಿಸಲಾಗಿದೆ.