ಮಂಗಳೂರು: ಸಾರ್ವಜನಿಕರ ತೀವ್ರ ವಿರೋಧದ ನಂತರವೂ ವಿವಾದಿತ ಸುರತ್ಕಲ್ ಟೋಲ್ ಗುತ್ತಿಗೆ ಮತ್ತೆ ಒಂದು ವರ್ಷಕ್ಕೆ ನವೀಕರಣಗೊಂಡಿದೆ ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆರೋಪಿಸಿದೆ.

ಸುಂಕ ಸಂಗ್ರಹ ಗುತ್ತಿಗೆ ನವೀಕರಣ ಪ್ರಕ್ರಿಯೆ ಸೋಮವಾರ ನಡೆದಿದೆ. ಈ ಹಿಂದಿನ ಗುತ್ತಿಗೆದಾರರಿಗೆ ದಿನಕ್ಕೆ 13 ಲಕ್ಷ ರೂ. ಸುಂಕ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿತ್ತು. ಇದನ್ನು 12 ಲಕ್ಷ ರೂಗಳಿಗೆ ಇಳಿಸಲಾಗಿದೆ. ಆ ಮೂಲಕ ಗುತ್ತಿಗೆದಾರರ ಹಾಗೂ ಅವರಿಂದ ಕಮೀಷನ್ ಪಡೆಯುವವರ ಜೇಬು ಮತ್ತಷ್ಟು ದಪ್ಪ ಆಗಲಿದೆ’ ಎಂದು ಅವರು ಆರೋಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ 60 ಕಿ.ಮೀ ವ್ಯಾಪ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಪ್ಲಾಜಾಗಳು ಇರುವಂತಿಲ್ಲ. ಇದ್ದರೆ, ಅವುಗಳನ್ನು ಮೂರು ತಿಂಗಳುಗಳ ಒಳಗೆ ತೆರವುಗೊಳಿಸುವುದಾಗಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಂಸತ್ತಿನಲ್ಲಿ ಮಾ.23ರಂದು ಭರವಸೆ ನೀಡಿದ್ದರು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆಜಮಾಡಿಯ ಟೋಲ್ ಪ್ಲಾಜಾ ಹಾಗೂ ಸುರತ್ಕಲ್ ಟೋಲ್ ಪ್ಲಾಜಾಗಳ ನಡುವೆ 30 ಕಿ.ಮೀ ಅಂತರವೂ ಇಲ್ಲ. ಆದರೂ ಸುರತ್ಕಲ್ ಟೋಲ್ ಪ್ಲಾಜಾ ಇನ್ನೂ ತೆರವಾಗದೆ ಬಿ.ಸಿ.ರೋಡ್–ಪಡೀಲ್–ಸುರತ್ಕಲ್‌ವರೆಗಿನ ಹೆದ್ದಾರಿಯನ್ನು ನವಮಂಗಳೂರು ಬಂದರು ಸಂಪರ್ಕ ಯೋಜನೆಯಡಿ 181.50 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಸುರತ್ಕಲ್ ಟೋಲ್ ಪ್ಲಾಜಾದಲ್ಲಿ 2015ರ ಡಿಸೆಂಬರ್‌ನಿಂದ ಸುಂಕ ಸಂಗ್ರಹಿಸಲಾಗುತ್ತಿದೆ.
ಟೋಲ್ ಗುತ್ತಿಗೆ ನವೀಕರಣವಾದ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಧಿಕಾರಿಗಳಲ್ಲಿ ಮಾಹಿತಿ ಕೇಳಿದಾಗ ಗುತ್ತಿಗೆ ನವೀಕರಣದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಇದರ ಬಗ್ಗೆ ಸಂಸದ ನಳಿನ್ ಪ್ರತಿಕ್ರಿಯೆ ನೀಡಿದ್ದು ಸುರತ್ಕಲ್ ಟೋಲ್ ಪ್ಲಾಜಾ ರದ್ದತಿ ಬಗ್ಗೆ ಎನ್‌ಎಂಪಿಎ ಅಧಿಕಾರಿಗಳು ಹಾಗೂ ಕೇಂದ್ರ ಬಂದರು ಸಚಿವರ ಜೊತೆ ಚರ್ಚಿಸಿದ್ದು, 28 ದಿನಗಳೊಳಗೆ ಈ ಕುರಿತು ಆದೇಶವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.
ಜನ ದಂಗೆ ಏಳದೆ ಸುರತ್ಕಲ್ ಟೋಲ್ ಲೂಟಿಗೆ ಅಂತ್ಯ ಕಷ್ಟ ಸಾಧ್ಯ
ಸ್ವಾತಂತ್ರೋತ್ಸವದ ಕೊಡುಗೆಯಾಗಿ ಸಂಸದರು ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವು ಘೋಷಣೆ ಮಾಡುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು.
ಆ ಮೂಲಕ ಇತ್ತೀಚೆಗೆ ಬಿಜೆಪಿ ಸರಕಾರ ಹಾಗೂ ಜನಪ್ರತಿನಿಧಿಗಳ ವಿರುದ್ದ ಎದ್ದಿರುವ ಜನಾಕ್ರೋಶದ ಡ್ಯಾಮೇಜ್ ಕಂಟ್ರೋಲ್‌ಗೆ ಪ್ರಯತ್ನ ನಡೆಸುತ್ತಾರೆ ಎಂಬ ನಿರೀಕ್ಷೆಯೂ ಇತ್ತು.
ಆದರೆ, ಸುರತ್ಕಲ್ ಅಕ್ರಮ ಟೋಲ್ ಗೇಟ್ ಸುಂಕ ಸಂಗ್ರಹದ ಒಂದು ವರ್ಷದ ಅವಧಿಯ ಗುತ್ತಿಗೆ ನವೀಕರಣ ಇಂದು ಅಧಿಕೃತವಾಗಿ ನಡೆದಿದೆ. ಭರತ್ ಶೆಟ್ಟಿ ಸೇರಿದಂತೆ ಬಿಜೆಪಿ ಶಾಸಕರುಗಳು ಅಂದರೆ ಇಷ್ಟೆ.
ಜನ ದಂಗೆ ಏಳದೆ ಸುರತ್ಕಲ್ ಟೋಲ್ ಲೂಟಿಗೆ ಅಂತ್ಯ ಕಷ್ಟ ಸಾಧ್ಯ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಈ ಹಿಂದೆ ಸಮಾಜ ಸೇವಕ ಆಸೀಫ್ ಆಪತ್ಭಾಂದವರವರು ಹಲವು ರೀತಿಯಲ್ಲಿ ಈ ಟೋಲ್ ಬಗ್ಗೆ ಹಲವು ದಿನಗಳ ಕಾಲ ಪ್ರತಿಭಟನೆಯೂ ನಡೆಸಿದ್ದು ಸಾರ್ವಜನಿಕರು ಜೊತೆ ಸೇರಿದ್ದರೂ ಕೂಡ ಎಲ್ಲವೂ ಇದೀಗ ನೀರಲ್ಲಿಟ್ಟ ಹೋಮದಂತಾಗಿದೆ.