ತುಮಕೂರು: ಹೆದ್ದಾರಿಯಲ್ಲಿ ಕ್ರೂಸರ್ ವಾಹನ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಕಾರಣ 9 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ತುಮುಕೂರಿನ ಶಿರಾ ಸಮೀಪ ಇಂದು ಮುಂಜಾನೆ ನಡೆದಿದೆ.

ಮೃತಪಟ್ಟವರನ್ನು ಮಾನ್ವಿ ತಾಲ್ಲೂಕಿನ ಸುಜಾತಾ (25), ಲಕ್ಷ್ಮಿ 913), ವಿನೋದ್ (3), ಕ್ರೂಸರ್ ಚಾಲಕ ಕೃಷ್ಣಪ್ಪ (25) ಎಂದು ತಿಳಿದುಬಂದಿದ್ದು ಉಳಿದವರ ಹೆಸರನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.
ರಾಯಚೂರು ಜಿಲ್ಲೆಯ ವಿವಿಧ ಗ್ರಾಮಗಳಿಂದ ತುಮಕೂರು ಹಾಗೂ ಬೆಂಗಳೂರಿನಲ್ಲಿ ಕೂಲಿ ಕೆಲಸಕ್ಕೆ ಎಂದು ಇವರೆಲ್ಲರೂ ನಿನ್ನೆ ಸಂಜೆ ತಮ್ಮ ಗ್ರಾಮಗಳಿಂದ ಕ್ರೂಸರ್ನಲ್ಲಿ ಹೊರಟಿದ್ದರು.

ಬೆಳಗಿನ ಜಾವ ನಾಲ್ಕು ಮೂವತ್ತರ ಸಂದರ್ಭದಲ್ಲಿ ಎಲ್ಲರೂ ಸಂಪೂರ್ಣ ನಿದ್ರೆಗೆ ಜಾರಿದ್ದರು.
ಈ ವೇಳೆ ದುರ್ಘಟನೆ ಸಂಭವಿಸಿದ್ದು ಶಿರಾ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಹನಗಳನ್ನು ತೆರವುಗೊಳಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ಮಾಡಿದ್ದಾರೆ.

ಅಪಘಾತಕ್ಕೆ ಒಳಗಾದ ಕುಟುಂಬಕ್ಕೆ ಪರಿಹಾರ ಘೋಷಣೆ: ಕೇಂದ್ರ ಹಾಗೂ ರಾಜ್ಯ ಸರಕಾರದ ವತಿಯಿಂದ ಮೃತಪಟ್ಟ ಹಾಗೂ ಗಾಯಳುಗಳಿಗೆಪರಿಹಾರ ಘೋಷಣೆ ಮಾಡಿದ್ದಾರೆ. ಮೃತಪಟ್ಟವರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ತಲಾ 5 ಲಕ್ಷ ಹಾಗೂ 2 ಲಕ್ಷ ಮತ್ತು ಗಾಯಾಳುಗಳಿಗೆ 50 ಸಾವಿರ ಮತ್ತು ರಾಜ್ಯ ಸರಕಾರದಿಂದ ಗಾಯಳುಗಳ ಚಿಕಿತ್ಸೆ ವೆಚ್ಚವನ್ನು ಭರಿಸಲಾಗುವುದೆಂದು ತಿಳಿದು ಬಂದಿದೆ.