ಬೆಂಗಳೂರು: ಅರಣ್ಯ, ಆಹಾರ ಮತ್ತು ನಾಗರಿಕ ಇಲಾಖೆ ಸಚಿವರಾದ ಉಮೇಶ್ ಕತ್ತಿ ನಿಧನರಾಗಿದ್ದಾರೆ.
ಮಂಗಳವಾರ ರಾತ್ರಿ ತಮ್ಮ ನಿವಾಸದಲ್ಲಿ ಹೃದಯಾಘಾತವಾಗಿದ್ದು ತಕ್ಷಣ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬೆಂಗಳೂರಿನ ನಿವಾಸದಲ್ಲಿದ್ದಾಗ ಬಾತ್ ರೂಮಿಗೆ ಹೋಗಿದ್ದಾಗ ಅಲ್ಲಿಯೇ ಕುಸಿದು ಬಿದ್ದಿದ್ದು ಹತ್ತು ನಿಮಿಷವಾದರೂ ಹೊರಗೆ ಬಾರದೇ ಇದ್ದುದರಿಂದ ಆತಂಕಗೊಂಡು ಕುಟುಂಬಸ್ತರು ಬಾಗಿಲು ಬಡಿದು ನೋಡಿದಾಗ ಪ್ರಜ್ಞೆ ಹೀನ ಸ್ಥಿತಿಯಲ್ಲಿ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ನಾಲ್ಕೈದು ಬಾರಿ ಹೃದಯ ತಪಾಸಣೆ ನಡೆಸಿದರೂ ಯಾವುದೇ ಫಲ ನೀಡಿಲ್ಲ ಎಂದು ರಾಮಯ್ಯ ಆಸ್ಪತ್ರೆ ಮೂಲಗಳು ತಿಳಿಸಿವೆ.
ಇವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸಂತಾಪ ಸೂಚಿಸಿದ್ದಾರೆ.
” ಅರಣ್ಯ ಸಚಿವ, ನನ್ನ ಆಪ್ತ ಸಹೋದ್ಯೋಗಿ ಶ್ರೀ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ಧಿ,ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ”, ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.