ಮಂಡ್ಯ: ಬಿಜೆಪಿ ಮುಖಂಡ ಹಾಗೂ ರಾಜ್ಯ ಧಾರ್ಮಿಕ ಪರಿಷತ್ ಜಿಲ್ಲಾ ಸಮಿತಿ ಸದಸ್ಯ ಜಗನ್ನಾಥ್ ಶೆಟ್ಟಿ ಅವರನ್ನು ಹನಿಟ್ರ್ಯಾಪ್‌ಗೆ ಒಳಪಡಿಸಿ 50 ಲಕ್ಷ ರೂ. ಪಡೆಯಲಾಗಿದೆ ಎಂಬ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಕಾಲೇಜು ವಿದ್ಯಾರ್ಥಿನಿಯೊಂದಿಗೆ ಲಾಡ್ಜ್ ನಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ವೀಡಿಯೋ ವೈರಲ್ ಆಗಿದೆ.
ಫೆ. 26ರ ರಾತ್ರಿ ನಡೆದಿದೆ ಎನ್ನಲಾದ ವೀಡಿಯೋದಲ್ಲಿ ಜಗನ್ನಾಥ್ ಶೆಟ್ಟಿ ಹಾಗೂ ವಿದ್ಯಾರ್ಥಿನಿ ಲಾಡ್ಜ್ ನಲ್ಲಿ ಇರುವಾಗಲೇ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಉಪನ್ಯಾಸಕ ಎಂದು ಹೇಳಿಕೊಂಡು ಟ್ಯೂಷನ್ ನೆಪದಲ್ಲಿ ವಿದ್ಯಾರ್ಥಿನಿಯನ್ನು ಲಾಡ್ಜ್ಗೆ ಕರೆಸಿಕೊಂಡಿರುವುದಾಗಿ ಆರೋಪಿಸಲಾಗಿದೆ.
ಯುವತಿಯ ಕಡೆಯವರು ಲಾಡ್ಜ್ ನ ರೂಂಗೆ ತೆರಳಿ ಜಗನ್ನಾಥ್ ಶೆಟ್ಟಿಗೆ ಥಳಿಸಿರುವುದು, ವಿದ್ಯಾರ್ಥಿನಿಯ ಮೇಲೂ ಹಲ್ಲೆಗೆ ಯತ್ನಿಸಿರುವುದು, ಶೆಟ್ಟಿ ಯುವತಿ ಕಡೆಯವರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿರುವುದು ಕೂಡ ವೀಡಿಯೋದಲ್ಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬಂಧಿಸಲ್ಪಟ್ಟಿರುವ ಸಲ್ಮಾಬಾನು ರೂಮಿಗೆ ಪ್ರವೇಶಿಸಿರುವುದು ಕೂಡ ವೀಡಿಯೋದಲ್ಲಿದೆ.
ಪ್ರಕರಣಕ್ಕೆ ಸಂಬಂಧಿಸಿ ಜಗನ್ನಾಥ ಶೆಟ್ಟಿ ಅವರು ಪೊಲೀಸ್ ದೂರು ದಾಖಲಿಸಿದ್ದು, ಸಲ್ಮಾ ಬಾನು ಹಾಗೂ ಇತರ ಕೆಲವರು ಬ್ಲ್ಯಾಕ್ ಮೇಲ್ ಮಾಡಿ ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈಗ ಇಡೀ ಪ್ರಕರಣವು ಗೊಂದಲಕಾರಿಯಾಗಿದ್ದು, ತನಿಖೆಯಿಂದಷ್ಟೇ ಸತ್ಯ ಬಹಿರಂಗವಾಗಬೇಕಿದೆ.