ದೆಹಲಿ: ದಿಲ್ಲಿಯಲ್ಲಿ ನಿನ್ನೆ ತಡ ರಾತ್ರಿ ಈಶಾನ್ಯ ಭಾಗದ ದಿಲ್ಲಿಯ ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ವೇಗವಾಗಿ ಬಂದ ಟ್ರಕ್ಕೊಂದು ಹರಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ತಡರಾತ್ರಿ 1.51ಕ್ಕೆ ಸೀಮಾಪುರಿ ಪ್ರದೇಶದ ದಿಲ್ಲಿ ಸಾರಿಗೆ ಸಂಸ್ಥೆ (ಡಿಟಿಸಿ) ಬಸ್ ಡಿಪೋ ಬಳಿ ಸಂಭವಿಸಿದ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು ಕರೀಂ (52), ಮತ್ತು ರಾಹು (45) ಛೋಟೆ ಖಾನ್ (25), ಶಾ ಆಲಂ (38) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡವರು ಮನೀಶ್(16)ಹಾಗೂ ಪ್ರದೀಪ್ (30) ಎಂದು ತಿಳಿದು ಬಂದಿದೆ.
ಆರು ಬಲಿಪಶುಗಳಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಬಗ್ಗೆ ಪೊಲೀಸರು ತಿಳಿಸಿದ್ದಾರೆ, ಇತರ ನಾಲ್ವರನ್ನು ಜಿಟಿಬಿ ಆಸ್ಪತ್ರೆಗೆ ರವಾನಿಸಲಾಗಿದೆ. ಅವರಲ್ಲಿ ಒಬ್ಬ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದರೆ ಮತ್ತೋರ್ವ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಶಹದಾರ) ಆರ್. ಸತ್ಯಸುಂದರಂ ತಿಳಿಸಿದ್ದಾರೆ.
ಇಂದು ಬೆಳಗಿನ ಜಾವ ಅವರ ಮೃತದೇಹಗಳು ಡಿವೈಡರ್ ಬಳಿ ಬಿದ್ದಿದ್ದು, ವಿದ್ಯುತ್ ಕಂಬವೊಂದು ಸ್ಥಳದಲ್ಲೇ ಉರುಳಿ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ.
ಘಟನೆಯ ನಂತರ ಚಾಲಕ ಟ್ರಕ್‌ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕನ ಪತ್ತೆಗೆ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.