ಬಂಟ್ವಾಳ: ಇಲ್ಲಿಗೆ ಸಮೀಪದ ಮಣಿಹಳ್ಳದಲ್ಲಿ ಭೀಕರ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು ಉಳಿದ ನಾಲ್ವರು ಸಣ್ಣ ಪ್ರಮಾಣದಲ್ಲಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಮಣಿಹಳ್ಳ ಎಂಬಲ್ಲಿ ಎರಡು ಕಾರು ಹಾಗೂ ಬಸ್ ಗಳ ನಡುವೆ ಭೀಕರ ಅಪಘಾತ ನಡೆದಿದ್ದು, ಕಾರಿನಲ್ಲಿದ್ದ ವಿಟ್ಲ ಮೆಸ್ಕಾಂ ಇಲಾಖೆಯ ಎಇಇ ಪ್ರವೀಣ್ ಜೋಶಿ ಅವರು ಮೃತಪಟ್ಟಿದ್ದಾರೆ.
ಇನ್ನೊಂದು ಕಾರಿನಲ್ಲಿದ್ದ ನಾಲ್ವರು ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಂಟ್ವಾಳ ಕಡೆಯಿಂದ ವಗ್ಗ ಕಡೆಗೆ ಹೋಗುತ್ತಿದ್ದ ಬ್ರಿಝಾ ಕಾರು, ವಗ್ಗದ ಮದ್ದ ಮನೆಯಿಂದ ಬರುತ್ತಿದ್ದ ಮೆಸ್ಕಾಂ ಎ.ಇ.ಇ. ಪ್ರವೀಣ್ ಜೋಶಿ ಅವರ ಕಾರುಗಳ ನಡುವೆ ಭೀಕರ ಅಪಘಾತ ನಡೆದಿದೆ. ಆ ಬಳಿಕ ಹಿಂಬದಿಯಿಂದ ಬಂದ ಬಸ್ ಕಾರುಗಳಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಫಿಗೋ ಕಾರಿನಲ್ಲಿದ್ದ ಜೋಶಿ ಅವರ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನೊಳಗಿಂದ ತೆಗೆಯಲು ಸಾರ್ವಜನಿಕರು ಹರಸಾಹಸ ಪಡೆಯಬೇಕಾಯಿತು. ಗಂಭೀರ ಗಾಯಗೊಂಡಿದ್ದ ಜೋಶಿ ಅವರನ್ನು 112 ಹೊಯ್ಸಳ ಪೊಲೀಸ್ ವಾಹನ ಚಾಲಕ ವಿಶ್ವನಾಥ ಅವರು ಆಸ್ಪತ್ರೆಗೆ ದಾಖಲಿಸಿದ್ದಾದರು, ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.
ವಿಜಯಲಕ್ಷ್ಮಿ ಗ್ರೂಪ್ ನ ಕ್ರೇನ್ ಬಳಸಿ ಅಪಘಾತ ನಡೆದ ವಾಹನಗಳನ್ನು ರಸ್ತೆಯಿಂದ ಬದಿಗೆ ಸರಿಸಲಾಯಿತು. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ. ಮೂರ್ತಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.