ಬಿಹಾರ: ವ್ಯಾಪಾರಿಯೊಬ್ಬರು ತಮ್ಮ ಕುಟುಂಬದ 6 ಸದಸ್ಯರೊಂದಿಗೆ ಸಾಮೂಹಿಕವಾಗಿ ವಿಷ ಸೇವಿಸಿ ಆತ್ಮಗತ್ಯೆ ಮಾಡಿಕೊಂಡ ಘಟನೆ ಬಿಹಾರದ ನವಾಡ ನಗರದ ಆದರ್ಶ ಸೊಸೈಟಿ ಬಳಿ ನಡೆದಿದೆ.
ಘಟನೆಯಲ್ಲಿ ಮೂವರು ಮಕ್ಕಳು ಸೇರಿ ಐದು ಮಂದಿ ಮೃತಪಟ್ಟಿದ್ದು, ಓರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದೆ.
ಈ ಘಟನೆಯಲ್ಲಿ ಕೇದಾರನಾಥ ಗುಪ್ತಾ, ಪತ್ನಿ ಅನಿತಾ ದೇವಿ, ಇಬ್ಬರು ಪುತ್ರಿಯರಾದ ಶಬನಮ್ ಕುಮಾರಿ, ಗುಡಿಯಾ ಕುಮಾರಿ ಮತ್ತು ಪುತ್ರ ಪ್ರಿನ್ಸ್ ಕುಮಾರ್ ಮೃತಪಟ್ಟಿದ್ದಾರೆ. ಇನ್ನೋರ್ವ ಮಗಳು ಸಾಕ್ಷಿ ಕುಮಾರಿ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇದಾರನಾಥ ಗುಪ್ತಾ ಅವರು ಮೂಲತಃ ರಾಜೌಲಿ ನಿವಾಸಿಯಾಗಿದ್ದು, ನಾವಡಾದ ನ್ಯೂ ಏರಿಯಾದಲ್ಲಿ ವಾಸಿಸುತ್ತಿದ್ದರು ಮತ್ತು ವಿಜಯ್ ಬಜಾರ್‌ನಲ್ಲಿ ಹಣ್ಣಿನ ಅಂಗಡಿಯನ್ನು ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ತಂದೆ ಸಾಲ ಮಾಡಿದ್ದು, ಸಾಲಗಾರರ ಕಿರಿ ಕಿರಿ ಹೆಚ್ಚಾಗಿ ತಂದೆ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ಕೇದಾರನಾಥ ಅವರ ಮಗಳು ಸಾಕ್ಷಿ ಕುಮಾರಿ ತಿಳಿಸಿದ್ದಾರೆ.
ಎಲ್ಲರೂ ತಂದೆಗೆ ಕಿರುಕುಳ ನೀಡುತ್ತಿದ್ದರು. ಹಣ ಕೇಳುತ್ತಿದ್ದರು… ಬೆದರಿಕೆ ಹಾಕುತ್ತಿದ್ದರು. ಸಾಲ ತೀರಿಸಲಾಗದೆ ಕುಟುಂಬದವರೆಲ್ಲ ಸೇರಿ ವಿಷ ಸೇವಿಸಲು ನಿರ್ಧರಿಸಿದ್ದು ಎಂದು ಹೇಳಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಣಕ್ಕಾಗಿ ತಂದೆಗೆ ಕಿರುಕುಳ ನೀಡುತ್ತಿದ್ದ ಕೆಲವರ ಹೆಸರನ್ನೂ ಸಾಕ್ಷಿ ನೀಡಿದ್ದಾರೆ.