ಬೆಂಗಳೂರು: ಟಿಪ್ಪು ಜಯಂತಿ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ. ಟಿಪ್ಪು ಸುಲ್ತಾನ್ ಅಪ್ರತಿಮ ದೇಶಪ್ರೇಮಿ. ವೀರ ಸ್ವಾತಂತ್ರ್ಯ ಹೋರಾಟಗಾರ, ದಕ್ಷ ಆಡಳಿತಗಾರ ಮತ್ತು ಪರಧರ್ಮ ಸಹಿಷ್ಣು ಟಿಪ್ಪು ಸುಲ್ತಾನ್ ಓರ್ವ ಆದರ್ಶಸ್ವರೂಪಿ ಜನನಾಯಕ. ಟಿಪ್ಪು ಜಯಂತಿ ದಿನ ಅವರಿಗೆ ಗೌರವದ ನಮನಗಳು ಎಂದು ಸಿದ್ದರಾಮಯ್ಯ ಟ್ವೀಟ್ (twitter) ಮಾಡಿ ಶುಭಾಶಯ ಹೇಳಿದ್ದಾರೆ.
ಸಿದ್ದರಾಮಯ್ಯ ಟ್ವೀಟ್:
ಅಪ್ರತಿಮ ದೇಶಪ್ರೇಮಿ, ವೀರ ಸ್ವಾತಂತ್ರ್ಯ ಹೋರಾಟಗಾರ, ದಕ್ಷ ಆಡಳಿತಗಾರ ಮತ್ತು ಪರಧರ್ಮ ಸಹಿಷ್ಣು ಟಿಪ್ಪು ಸುಲ್ತಾನ್ ಓರ್ವ ಆದರ್ಶಸ್ವರೂಪಿ ಜನನಾಯಕ. ಟಿಪ್ಪು ಜಯಂತಿ ದಿನ ಅವರಿಗೆ ಗೌರವದ ನಮನಗಳು.
ಜೆಡಿಎಸ್ ಕಛೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ:
ಬೆಂಗಳೂರಿನ ಜೆಡಿಎಸ್ ಕಛೇರಿ ಜೆಪಿ ಭವನದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾಯಿತು. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವುದು ನನಗೆ ಖುಷಿ ತಂದಿದೆ – ಹೆಚ್.ವಿಶ್ವನಾಥ್
ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವುದು ನನಗೆ ಖುಷಿ ತಂದಿದೆ ಎಂದು ಮೈಸೂರಿನಲ್ಲಿ ವಿಧಾನ ಪರಿಷತ್ನ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ. ಟಿಪ್ಪು ಕನ್ನಡ ವಿರೋಧಿ ಎಂದು ಬಿಂಬಿಸುವವರಿಗೆ ಇದು ತಕ್ಕ ಉತ್ತರ. ಶತ್ರುಗಳ ಮುಂದೆ ಮಂಡಿಯೂರದ ಏಕೈಕ ವ್ಯಕ್ತಿ ಟಿಪ್ಪು ಸುಲ್ತಾನ್ ಎಂದು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ MLC ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಆರ್ಥಿಕ ವಲಯವನ್ನು ಉತ್ತಮಪಡಿಸಿದ್ದು ಟಿಪ್ಪು. ಕನ್ನಂಬಾಡಿ ಕಟ್ಟೆಯನ್ನ ಯದುವಂಶದವರು ಕಟ್ಟಿದರು, ಅದಕ್ಕೆ ಭೂಮಿ ಪೂಜೆ ಮಾಡಿದವರು ಟಿಪ್ಪು. ಮೈಸೂರು ಹುಲಿ ಎಂಬ ಬಿರುದು ಯಾರೋ ಮಹಾರಾಜರು ನೀಡಿಲ್ಲ. ಈ ನಾಡಿನ ಪ್ರಜೆಗಳು ಟಿಪ್ಪುಗೆ ಮೈಸೂರು ಹುಲಿ ಬಿರುದು ನೀಡಿದ್ದಾರೆ. ಟಿಪ್ಪು ಮತಾಂತರ ಮಾಡಿದ, ಹಲವರನ್ನು ಕೊಂದ ಎಂದು ಹೇಳುತ್ತಾರೆ. ಟಿಪ್ಪು ಮತಾಂತರ ಮಾಡಿಲ್ಲ, ಯಾರನ್ನೂ ಕೊಂದಿಲ್ಲ ಎಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ.
ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸತ್ಯ ಹೇಳಬೇಕು -ಹೆಚ್ ವಿಶ್ವನಾಥ್
ಯಾರೋ ಏನೋ ಹೇಳಬಹುದು ರೈಲಿನ ಹೆಸರನ್ನು ತೆಗೆಯಬಹುದು. ಆದರೆ ನಾಡಿನ ಜನರ ಮನಸ್ಸಿನಿಂದ ಅವರನ್ನು ತೆಗೆಯಲು ಯಾರಿಗೂ ಸಾಧ್ಯವಾಗದು. ಟಿಪ್ಪು ಮತಾಂತರ ಮಾಡಿದ, ಕೊಂದ ಎಂದು ಹೇಳುತ್ತಾರೆ ಅದೆಲ್ಲ ಸುಳ್ಳು. ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸತ್ಯ ಹೇಳಬೇಕು. ಟಿಪ್ಪು ಆಡಳಿತ, ಧೈರ್ಯ ಶೌರ್ಯ, ಕಲ್ಯಾಣ ಕಾರ್ಯಕ್ರಮಗಳನ್ನು ಯಾರೂ ಅಲ್ಲೆಗೆಳೆಯಲು ಸಾಧ್ಯವಾಗದು. ಮೈಸೂರಿನ ಸಂಸ್ಥಾನದಲ್ಲಿ ಅಂದು ಎಷ್ಟು ಜನಸಂಖ್ಯೆ ಇತ್ತು? 70 ಸಾವಿರ ಜನರನ್ನು ಕೊಂದ, ಮತಾಂತರ ಮಾಡಿದ ಎಂದು ಹೇಳುತ್ತಾರೆ. ಹಾಗಾದರೆ ಅಂದು ಜನಸಂಖ್ಯೆ ಎಷ್ಟಿತ್ತು?
ಶೃಂಗೇರಿ ಮಠ ಸಂಕಷ್ಟದಲ್ಲಿದ್ದಾಗ ಧರ್ಮಧಿಕಾರಿಗಳು ಟಿಪ್ಪುಗೆ ಪತ್ರ ಬರೆಯುತ್ತಾರೆ. ಅಂದು ಟಿಪ್ಪು ಮಠವನ್ನು ರಕ್ಷಣೆ ಮಾಡುತ್ತಾರೆ. ಟಿಪ್ಪು ಧರ್ಮದ ಪರವು ಆಡಳಿತ ಪರವೂ ಇದ್ದರು. ಮಹಿಳೆಯರಿಗೆ ಕೇರಳದಲ್ಲಿ ವಸ್ತ್ರ ಸಂಹಿತೆಯನ್ನ ಜಾರಿಗೆ ತಂದಿದ್ದು ಟಿಪ್ಪು ಸುಲ್ತಾನ್ ಎಂದು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದರು.