ಮಂಗಳೂರು: ಜಗತ್ತಿನ ಎಲ್ಲಾ ಧರ್ಮಗಳು, ನೀನು ಹುಟ್ಟಿರುವ ನೆಲಕ್ಕೆ ನಿನ್ನ ಮೊದಲ ಗೌರವ ಸಲ್ಲುವಂತಾಗಲಿ ಎಂಬುದನ್ನೇ ಸಾರಿ ಹೇಳುತ್ತವೆ. ಶಾಂತಿ, ಅಭಿವೃದ್ಧಿ, ದೇಶಭಕ್ತಿಯನ್ನು ಸಾರಬೇಕಾಗಿರುವ ಧರ್ಮದ ಉದ್ದೇಶಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ. ಈ ಕಾರಣಕ್ಕಾಗಿ ಸಮಾಜದಲ್ಲಿ ಕೆಲವು ಅಹಿತಕರ ಘಟನೆಗಳು ನಡೆಯುತ್ತಿವೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಅವರು ಕದಂಬಾಡಿ ರಾಮಯ್ಯ ಗೌಡ ರ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆಗೈದು ಬಳಿಕ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕಳೆದು ಹೋದ ಇತಿಹಾಸವನ್ನು ನೆನಪಿಸಿದ, ಮರೆತು ಹೋದ ವೀರ ಮಹಾನಾಯಕನನ್ನು ಜಗತ್ತಿಗೆ ತಿಳಿಸಿದ ವೀರ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ನಿರ್ಮಾಣ ಸಮಿತಿಗೆ ಹಾಗೂ ಮಂಗಳೂರಿನ ನಾಗರೀಕರಿಗೆ ನನ್ನ ಅನಂತ ಧನ್ಯವಾದಗಳು.
ಸ್ವಾತಂತ್ರ್ಯದ ಸಮರದಲ್ಲಿ ಮರೆತುಹೋದ ಮಹಾನ್ ನಾಯಕರಿಗೆ ಸೂಕ್ತ ಗೌರವ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಕದಂಬಾಡಿ ರಾಮಯ್ಯ ಗೌಡರ ಸಾಹಸದ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಅಳವಡಿಸುವಂತೆ ಶೀಘ್ರದಲ್ಲೇ ನಿರ್ದಾರಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಸಂಘಟನಾ ಚತುರ 13 ದಿನಗಳ ಕಾಲ ಮಂಗಳೂರನ್ನು ಆಳಿದ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹಿತ ಹಲವಾರು ಘಟಾನು ಘಟಿ ರಾಜಕೀಯ ಮತ್ತು ಧಾರ್ಮಿಕ ನಾಯಕರ ಸಮ್ಮುಖದಲ್ಲಿ ಇಂದು ಮಂಗಳೂರುನ ಬಾವುಟಗುಡ್ಡೆಯ ಠಾಗೂರ್ ಪಾರ್ಕ್ ನಲ್ಲಿ ಲೋಕಾರ್ಪಣೆಗೈಯಲಾಯಿತು.