ಮಂಗಳೂರು: ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ದಿಢೀರ್ ನಿಗೂಢ ಸ್ಫೋಟವಾದ ಘಟನೆ ಇಂದು(ನ.19) ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ಬಳಿ ಸಂಭವಿಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ಹಾಗೂ ವಿಧಿವಿಜ್ಞಾನ ಇಲಾಖೆಯ ತಜ್ಞರು ಹಾಗೂ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಆಟೋ ಬ್ಲಾಸ್ಟ್ ಆಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಫೋಟಕ್ಕೆ ಕಾರಣವೇನು ಎಂದು ಪೊಲೀಸ್, ವಿಧಿವಿಜ್ಞಾನ ಇಲಾಖೆಯ ತಜ್ಞರು ಹಾಗೂ ಬಾಂಬ್ ನಿಷ್ಕ್ರಿಯ ದಳ ತನಿಖೆ ಚುರುಕುಗೊಳಿಸಿದೆ.
ಇನ್ನು ಈ ಘಟನೆ ಬಗ್ಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರತಿಕ್ರಿಯಿಸಿದ್ದು, ಪ್ರಯಾಣಿಕ ಹತ್ತಿದ ಬಳಿಕ ಆಟೋನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಟೋದಲ್ಲಿ ತೆರಳುತ್ತಿದ್ದ ಪ್ರಯಾಣಿಕನ ಬಳಿ ಬ್ಯಾಗ್ ಇತ್ತು. ಘಟನೆಯಲ್ಲಿ ಪ್ರಯಾಣಿಕ ಹಾಗೂ ಚಾಲಕನಿಗೆ ಗಾಯವಾಗಿದ್ದು, ಚಾಲಕನಿಗೆ ಯಾವುದೇ ರೀತಿ ಗಾಯವಾಗಿಲ್ಲ. ಘಟನೆ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ ಎಂದು ಹೇಳಿದರು.
ಕಂಕನಾಡಿ ಪೊಲೀಸ್ ಠಾಣೆಯ ಬಳಿ ಈ ಘಟನೆ ನಡೆದಿದೆ. ಪ್ರಾರಂಭದಲ್ಲಿ ಅಟೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಾಗುರಿಯಿಂದ ಪಂಪ್ ವೆಲ್ ಕಡೆ ಅಟೋ ಸಾಗುತಿತ್ತು. ನಾಗುರಿಯಿಂದ ಹತ್ತಿದ ಪ್ರಯಾಣಿಕನ ಕೈಯಲ್ಲಿದ್ದ ಪ್ಲ್ಯಾಸ್ಟಿಕ್ ಬ್ಯಾಗ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬ್ಯಾಗ್ ಹಿಡಿದುಕೊಂಡ ವ್ಯಕ್ತಿಗೆ ಬೆಂಕಿ ತಗುಲಿದ್ದು, ಬೆಂಕಿ ತಗುಲಿದ ಸಂದರ್ಭ ಅಟೋ ಒಳಭಾಗ ಸುಟ್ಟು ಹೋಗಿದೆ. ಪ್ರಯಾಣಿಕ ಹಾಗೂ ಅಟೋ ಚಾಲಕನಿಗೆ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಬೆಂಕಿಕಾಣಿಸಿಕೊಂಡಿದೆ ಎಂದು ಅಟೋ ಚಾಲಕ ಹೇಳುತ್ತಿದ್ದಾನೆ.ಈ ಬಗ್ಗೆ ಸಮಗ್ರವಾದ ವಿಚಾರಣೆ ನಡೆಸಲಾಗುತ್ತದೆ. ಬ್ಲಾಸ್ಟ್ ಆದ ಬಗ್ಗೆ ಪ್ರತ್ಯಕ್ಷ ಸಾಕ್ಷಿಗಳು ಏನು ಹೇಳಿಲ್ಲ ಎಂದು ಮಾಹಿತಿ ನೀಡಿದರು.