ಮಂಗಳೂರು:ಕಳೆದ ೩ ದಿನಗಳ ಹಿಂದೆ ನಂತೂರು ಸರ್ಕಲ್ ಬಳಿ ಗುರುವಾರ ಸಂಜೆ ಭಿನ್ನ ಕೋಮಿನ ಜೋಡಿ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ಮೂವರನ್ನು ಆರೋಪಿಗಳನ್ನು ಬಂಧಿಸಿದ್ದಾರೆ.
ಸುರತ್ಕಲ್ ನಿವಾಸಿ ಮುತ್ತು(18), ಪ್ರಕಾಶ್(21) ಮತ್ತು ಅಸೈಗೋಳಿ ನಿವಾಸಿ ರಾಕೇಶ್(23) ಎಂಬವರನ್ನು ಬಂಧಿಸಿದ್ದಾರೆ.
ಈ ಮೂವರೂ ಆರೋಪಿಗಳು ಭಜರಂಗದಳ ಮತ್ತು ವಿಶ್ವಹಿಂದು ಪರಿಷತ್ ಕಾರ್ಯಕರ್ತರು ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 24ರಂದು ಸಂಜೆ ಕಾರ್ಕಳದ ನಿಟ್ಟೆಯಿಂದ ತನ್ನ ಸಹಪಾಠಿ ಎಂದು ಹೇಳಿಕೊಂಡಿರುವ ಯುವತಿಯ ಜೊತೆಗೆ ಅಗಮಿಸುತ್ತಿದ್ದ ಜೆಪ್ಪು ನಿವಾಸಿ ಸೈಯ್ಯದ್ ರಶೀಮ್‌ನನ್ನು ನಂತೂರು ಸರ್ಕಲ್ ಬಳಿ ಏಕಾಏಕಿ ಬಸ್ಸನ್ನು ಅಡ್ಡ ಹಾಕಿ ಒಳನುಗ್ಗಿದ ತಂಡ, ಯುವಕನ ಬಳಿ ಇದ್ದ ಐಡಿ ಕಾರ್ಡ್ ತೋರಿಸಲು ಹೇಳಿ ಬಳಿಕ ಬಸ್ಸಿನಿಂದ ಕೆಳಕ್ಕೆ ಎಳೆದು ಹಾಕಿ ಹಲ್ಲೆ ನಡೆಸಿದ್ದರೆಂದು ತಿಳಿದು ಬಂದಿದೆ.
ಆತನ ಜೊತೆಗೆ ಇದ್ದ ಭಿನ್ನ ಕೋಮಿನ ಯುವತಿಗೂ ಅಶ್ಲೀಲ ಪದಗಳನ್ನು ಬಳಸಿ ತರಾಟೆಗೆ ತೆಗೆದುಕೊಂಡಿದ್ದರು. ಅದಲ್ಲದೇ ಆರೋಪಿಗಳು ದೊಣ್ಣೆ ಬೆತ್ತ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದರು ಎಂದು ಸಂತ್ರಸ್ತ ಯುವಕ ಸೈಯ್ಯದ್ ರಶೀಮ್ ಕದ್ರಿ ಠಾಣೆಗೆ ದೂರು ನೀಡಿದ್ದರು.
ಸೈಯ್ಯದ್ ರಶೀಮ್ ಹಾಗೂ ಯುವತಿ ನಗರದ ಕಾಲೇಜಿನ ಸಹಪಾಠಿಗಳಾಗಿದ್ದರು. ಅಕ್ಟೋಬರ್ ತಿಂಗಳಿನಲ್ಲೂ ಭಿನ್ನ ಕೋಮಿನ ಯುವತಿ ಜೊತೆಗೆ ಬೆಂಗಳೂರಿಗೆ ಹೋಗುತ್ತಿದ್ದಾಗ ಮುಸ್ಲಿಂ ಯುವಕನನ್ನು ಬಸ್ಸಿನಿಂದ ಕೆಳಕ್ಕೆ ಇಳಿಸಿದ ಭಜರಂಗದಳ ಕಾರ್ಯಕರ್ತರು ಪಂಪೈಲ್ ಬಳಿ ಹಲ್ಲೆ ನಡೆಸಿದ್ದರು.
ನಂತೂರಿನ ಸೈಯದ್ ರಶೀಮ್ ಮೇಲೆ ನಡೆದ ಹಲ್ಲೆ ಪ್ರಕರಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ಅವರು ಈಗಾಗಲೇ ಟ್ವಿಟ್ ಮೂಲಕ ತಿಳಿಸಿದ್ದರು.