ಮಂಗಳೂರು: ಪಿಕಪ್ ಚಾಲಕನೊಬ್ಬ ತನ್ನ ವಾಹನವನ್ನು ಬೇಕಾಬಿಟ್ಟಿ ಚಲಾಯಿಸಿ ಸಿಕ್ಕ ಸಿಕ್ಕ ವಾಹನಗಳಿಗೆ ಢಿಕ್ಕಿ ಹೊಡೆದುಕೊಂಡು ಜಖಂಗೊಳಿಸಿದ ಕಾರಣಕ್ಕೆ ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿದ ಘಟನೆ ಕಿನ್ನಿಗೋಳಿ- ಮೂಲ್ಕಿ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ತಡ ರಾತ್ರಿ ಸಂಭವಿಸಿದೆ.
ಪಿಕಪ್ ಚಾಲಕ ಮತ್ತು ನಿರ್ವಾಹಕರಿಬ್ಬರೂ ಗಾಂಜಾ ನಶೆಯಲ್ಲಿದ್ದರು ಎನ್ನಲಾಗಿದ್ದು ಹಲ್ಲೆ ನಡೆಸುವ ವೇಳೆ ಚಾಲಕನು ಹಿಂದೂ ಧರ್ಮೀಯನೆಂದು ನಂಬಿಸಲು ಹಿಂದೂ ಹೆಸರು ಹೇಳಿದ್ದನು.
ಆದರೆ ಡ್ರೈವಿಂಗ್ ಲೈಸೆನ್ಸ್ ಪರಿಶೀಲನೆ ವೇಳೆ ಅದರಲ್ಲಿ ಮುಸ್ಲಿಮ್ ಹೆಸರು ಕಂಡು ಬಂದಿತ್ತು. ಹಿಂದೂ ಹೆಸರು ಹೇಳಿದ್ದಕ್ಕಾಗಿ ಬೆನ್ನಟ್ಟಿ ಬಂದ ಜನರು ತೀವ್ರ ಆಕ್ರೋಶಗೊಂಡಿದ್ದರು.
ಆಕ್ರೋಶಿತರಾದ ವಾಹನ ಚಾಲಕ- ಮಾಲಕರು ಪಿಕಪ್ ವಾಹನವನ್ನು ಸುಮಾರು 12 ಕಿಲೋ ಮೀಟರ್ ಗಳಷ್ಟು ದೂರ ಬೆನ್ನಟ್ಟಿ ಹೊಸ ಕಾವೇರಿ ಬಳಿ ತಡೆದು ನಿಲ್ಲಿಸಿ ಪಿಕಪ್ ಚಾಲಕ ಮತ್ತು ನಿರ್ವಾಹಕನಿಗೆ ಧರ್ಮದೇಟು ನೀಡಿದ್ದಾರೆ.
ಚಾಲಕ ಅಮಲಿನಲ್ಲಿ ವರ್ತಿಸುತ್ತಿದ್ದು ಆತ ಗಾಂಜಾ ಸೇವನೆ ಮಾಡಿದ್ದ ಎಂದು ಶಂಕಿಸಲಾಗಿದೆ.
ಬಜ್ಪೆಯಿಂದ ಹೊರಟಿದ್ದ ಪಿಕಪ್ ವಾಹನ ಬಜ್ಪೆ ಚೆಕ್ ಪೋಸ್ಟ್ ಬಳಿಯೇ 3 ಬೈಕ್‌ಗೆ ಡಿಕ್ಕಿ ಹೊಡೆದಿದ್ದು ಆದರೂ ಚಾಲಕನು ಪಿಕಪ್ ವಾಹನವನ್ನು ಅಲ್ಲಿ ನಿಲ್ಲಿಸದೆ ಮುಂದಕ್ಕೆ ಚಲಾಯಿಸುತ್ತಾ ಹೋಗಿ ಮತ್ತೆ ಹಲವು ಬೈಕ್, ಕಾರು, ಬಸ್ ಗಳಿಗೆ ಢಿಕ್ಕಿ ಹೊಡೆಸಿದ್ದನು.
ಇದರಿಂದ ಆಕ್ರೋಶಿತರಾದ ಸಾರ್ವಜನಿಕರು ಪರಾರಿಯಾಗಲು ಯತ್ನಿಸಿದ್ದ ಪಿಕಪ್ ಚಾಲಕನನ್ನು ಸುಮಾರು ಹತ್ತು ಬೈಕ್ ಗಳಲ್ಲಿ ಬೆನ್ನಟ್ಟಿದ್ದರು.
ಸುಮಾರು 12 ಕಿಲೋ ಮೀಟರ್ ಕ್ರಮಿಸಿದ ಬಳಿಕ ಹೊಸ ಕಾವೇರಿ ಬಳಿ ಪಿಕಪ್ ವಾಹನವನ್ನು ಅಡ್ಡ ಗಟ್ಟುವಲ್ಲಿ ಯಶಸ್ವಿಯಾದ ಆಕ್ರೋಶಿತರ ಗುಂಪು ಪಿಕಪ್ ಚಾಲಕ ಮತ್ತು ನಿರ್ವಾಹಕನನ್ನು ವಾಹನದಿಂದ ಹೊರಗೆಳೆದು ಮುಖ, ಮೂತಿ ನೋಡದೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.