ಚಿ.ಮಂಗಳೂರು: ಜೀವನದಲ್ಲಿ ಪ್ರೀತಿಸಿದವರು ಸಿಗುವುದು ಅಪರೂಪ, ಪ್ರೀತಿಸಿದವರು ಒಂದಾಗುವುದಂತು ಬಹಳ ಅಪರೂಪ ಅಂತದರಲ್ಲಿ ಇಲ್ಲಿ ಪ್ರೇಮಿಗಳಿಬ್ಬರು ಒಂದೇ ನೇಣಿನ ಕುಣಿಕೆಗೆ ಕೊರಳೊಡ್ಡಿ ಒಂದೇ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಸಮೀಪದ ಗುಲ್ಲನ್‌ಪೇಟೆಯ ಸತ್ತಿಹಳ್ಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ತಾಲೂಕಿನ ಕಲ್ಲುಗುಡ್ಡೆ ಸಮೀಪದ ಆಣೂರಿನ ದರ್ಶನ್ ಹಾಗೂ ಯುವತಿಯನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾನ್‌ಬಾಳು ಮೂಲದ ಪೂರ್ವಿಕಾ ಎಂದು ತಿಳಿದು ಬಂದಿದೆ.
ಇವರಿಬ್ಬರಲ್ಲಿ ಯುವತಿ 20 ವರ್ಷ ಹಾಗೂ ಯುವಕ 22 ವರ್ಷದ ಒಳಗಿನವರು ಎಂದು ಅಂದಾಜಿಸಲಾಗಿದೆ. ಆದರೆ, ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ದರ್ಶನ್ ಚಿಕ್ಕಮಗಳೂರಿನಲ್ಲಿದ್ದು ಪೂರ್ವಿಕಾ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಳು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಇಬ್ಬರು ಪ್ರೇಮಿಗಳಿರಬಹುದು ಎಂದು ಶಂಕಿಸಲಾಗಿದೆ.

ವೇಲಿನ ಒಂದು ತುದಿಗೆ ಆಕೆ ಕೊರಳೊಡ್ಡಿದ್ದರೆ, ಮತ್ತೊಂದು ತುದಿಗೆ ದರ್ಶನ್ ನೇಣು ಬಿಗಿದುಕೊಂಡಿದ್ದು ತಾವು ಪ್ರೇಮಿಗಳಾಗಿ ಒಂದಾಗಲು ಕಷ್ಟ ಎಂದೆನಿಸಿ ಸಾವಿನಲ್ಲಿ ಒಂದಾಗುವ ಎಂಬ ತಿರ್ಮಾಣ ಕೈಗೊಂಡು ಈ ರೀತಿಯ ನಿರ್ಧಾರ ತೆಗೆದುಕೊಂಡರೆ ಎಂದು ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಆಲ್ಲೂರು ಪೊಲೀಸರು ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ತಂದಿದ್ದಾರೆ. ಆಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.